ಸುಳ್ಯ: ಆರೋಗ್ಯ, ಕುಟುಂಬ ಕಲ್ಯಾಣ ಹಾಗು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರಿಗೆ
ಸುಳ್ಯದ ಪ್ರಮುಖ ಬೆಡಿಕೆಗಳ ಈಡೇರಿಕೆಗಾಗಿ ಮನವಿ ಅರ್ಪಿಸಲಾಯಿತು. ಸಾರ್ವಜನಿಕ ಅಭಿನಂದನಾ ಸಮಿತಿಯ ಪ್ರಧಾನ ಸಂಚಾಲಕ ಭರತ್ ಮುಂಡೋಡಿ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಸುಳ್ಯ – ಸುಬ್ರಹ್ಮಣ್ಯ ರಸ್ತೆ, ಸುಳ್ಯ ಬೆಳ್ಳಾರೆ ರಸ್ತೆ, ಕುಂಬ್ರ – ನಿಂತಿಕಲ್ ರಸ್ತೆ ಮತ್ತು ದರ್ಬೆ – ಸುಬ್ರಹ್ಮಣ್ಯ ರಸ್ತೆಗಳನ್ನು
ಚತುಷ್ಪಥ ರಸ್ತೆಗಳಾಗಿ ಪರಿವರ್ತಿಸಲು ಅಗತ್ಯ ಅನುದಾನ ಒದಗಿಸಬೇಕು,
ತಾಲೂಕು ಕೇಂದ್ರವಾದ ಸುಳ್ಯ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಗರದ ಒಳರಸ್ತೆಗಳಾದ ಕೊಡಿಯಾಲಬೈಲು – ದುಗಲಡ್ಕ ರಸ್ತೆ,ಸರಕಾರಿ ಜೂನಿಯರ್ ಕಾಲೇಜ್ ಕಡೆಯಿಂದ ಜ್ಯೋತಿ ವೃತ್ತಕ್ಕೆ ಹೋಗುವ ರಸ್ತೆ, ಎಸ್.ವಿ.ಯಂ. ಆಸ್ಪತ್ರೆ ಬಳಿಯಿಂದ ನಾವೂರು ಮೂಲಕ ಗಾಂಧಿನಗರವನ್ನು ಸಂಪರ್ಕಿಸುವ ರಸ್ತೆ, ಗುರುಂಪು – ಕೆರೆಮೂಲೆ ಬೂಡು ಸಂಪರ್ಕ ರಸ್ತೆ, ರಥಬೀದಿ -ಅಂಬಟಡ್ಕ – ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆಯನ್ನು ಪೂರ್ಣವಾಗಿ ಅಭಿವೃದ್ಧಿ ಪಡಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
ಒಂದು ಕ್ರೀಡಾ ಶಾಲೆ, ಕ್ರೀಡಾ ಸಂಕೀರ್ಣ ನಿರ್ಮಾಣ ಹಾಗೂ – ಸುಮಾರು 10 ಎಕರೆ ಪ್ರದೇಶದಲ್ಲಿ 400 ಮೀಟರ್ ಟ್ಯಾಕ್ನ ಸುಸಜ್ಜಿತ ಕ್ರೀಡಾಂಗಣ ಮತ್ತು ಹೆಲಿಪ್ಯಾಡ್ ನಿರ್ಮಾಣ ಮಾಡುವುದು. ಈಗಾಗಲೇ ಶಾಂತಿನಗರದಲ್ಲಿ ಇರುವ ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು.
ಅಡಿಕೆ ಮತ್ತು ರಬ್ಬರ್ ಕೃಷಿಯನ್ನು ಮೌಲ್ಯವರ್ಧನೆಗೊಳಿಸುವ ದೃಷ್ಟಿಯಿಂದ ಅವುಗಳ ಉಪಉತ್ಪನ್ನಗಳನ್ನು ಮಾಡುವ ಕೈಗಾರಿಕೆಗಳನ್ನು ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಸ್ಥಾಪಿಸಬೇಕು, ಸುಳ್ಯ ತಾಲೂಕಿನ ಸೂಕ್ತ ಸ್ಥಳದಲ್ಲಿ ಇಂಡಸ್ಟ್ರಿಯಲ್ ಏರಿಯಾ ಸ್ಥಾಪಿಸಬೇಕು.
ಸುಳ್ಯ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು, ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳ ರಸ್ತೆ ಸೌಕರ್ಯ ಅಭಿವೃದ್ಧಿ ಪಡಿಸುವುದು ಹಾಗೂ ಆ ಸ್ಥಳಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಲಭ್ಯ ಕಲ್ಪಿಸಬೇಕು, ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24X7 ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸಬೇಕು.
ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸಬೇಕು ಇತ್ಯಾದಿ ಅಭಿವೃದ್ಧಿ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು. ಸಾರ್ವಜನಿಕರು ಸಲ್ಲಿಸಿದ ವಿವಿಧ ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಲಾಯಿತು.







