ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಮಳೆಗಾಲದಲ್ಲಿ ಭೋರ್ಗರೆಯುವ ನದಿ, ಹಳ್ಳಗಳಿಂದ ಹಳ್ಳಿಗಳನ್ನು ತೂಗು ಸೇತುವೆಗಳ ಮೂಲಕ ಸಂಪರ್ಕಿಸಿ ಲಕ್ಷಾಂತರ ಮಂದಿಯನ್ನು ಹೊರ ಜಗತ್ತಿಗೆ ಕೈ ಹಿಡಿದು ಕರೆ ತಂದವರು ‘ತೂಗುಸೇತುವೆಗಳ ಸರದಾರ’ ನೆಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್. ಬಿ.ಇ. ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ಗಿರೀಶ್ ಭಾರದ್ವಾಜ್ ಸ್ಟೀಲ್ ಫ್ಯಾಬ್ರಿಕೇಶನ್, ರಿಪೇರಿ ಕೆಲಸಗಳು, ಪಂಪ್ಸೆಟ್ ಫಿಟ್ಟಿಂಗ್ ಇಂಥ ಕೆಲಸಗಳನ್ನು ಮಾಡಿಕೊಂಡಿದ್ದವರು. ಹೊಸತನದ ತುಡಿತ ಸದಾ
ಹೊಂದಿದ್ದ ಅವರು ಏನಾದರೂ ಮಾಡಬೇಕೆಂಬ ಹಂಬಲವಿತ್ತು.ಆ ಹಂಬಲವೇ ದೇಶದ ಇತಹಾಸ ಪುಟದಲ್ಲಿ ಸುಳ್ಯವನ್ನು ಗುರುತಿಸುವಂತೆ ಮಾಡಿತು.ಗಿರೀಶ್ ಭಾರದದ್ವಾಜ್ ಅವರನ್ನು ನಕ್ಷತ್ರದಂತೆ ಮಿನುಗುವಂತೆ ಮಾಡಿತು. ಭಾರತದ ಹಳ್ಳಿಗಳನ್ನು ಕಡಿಮೆ ಖರ್ಚಿನಲ್ಲಿ ಬೆಸೆಯಲು ಆಧುನಿಕ ತಂತ್ರಜ್ಞಾನದಲ್ಲಿ ತೂಗು ಸೇತುವೆ ನಿರ್ಮಿಸುವುದು ಹೇಗೆಂಬ ಕುರಿತ ಸಾಕಷ್ಟು ಅಧ್ಯಯನ ನಡೆಸಿದ ಬಳಿಕ ರೂಪುರೇಷೆ ಸ್ಪಷ್ಟವಾಗಿತ್ತು. ಅದರಂತೆ ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ ನದಿಗೆ ಮೊದಲ ತೂಗುಸೇತುವೆ ನಿರ್ಮಾಣಗೊಂಡಿತು. 55 ಮೀಟರ್ ಉದ್ದದ ಸೇತುವೆ ನಿರ್ಮಾಣದ ಮೂಲಕ ವಿನೂತನ ಕ್ಷೇತ್ರಕ್ಕೆ ಭಾರದ್ವಾಜ್ ಪದಾರ್ಪಣೆ ಮಾಡಿದರು.ನದಿಗಳ ಮೇಲೆ 140 ತೂಗುಸೇತುವೆಗಳ ಹಸ್ತಾಕ್ಷರ ಹಾಕಿದರು.
ದೇಶದ ವಿವಿಧ ಕಡೆಗಳಲ್ಲಿ ತೂಗುಸೇತುವೆಗಳನ್ನು ನಿರ್ಮಿಸುವ ಜೈತ್ರಯಾತ್ರೆ ನಡೆಸಿದ ಗಿರೀಶ್ ಭಾರದ್ವಾಜ್ ಅವರು ಕರ್ನಾಟಕ, ಕೇರಳ, ಒಡಿಶಾ, ಆಂಧ್ರಪ್ರದೇಶಗಳಲ್ಲಿ 140 ತೂಗುಸೇತುವೆಗಳನ್ನು ನಿರ್ಮಿಸಿದ್ದಾರೆ. ಹಲವು ಹಳ್ಳಿಗಳ ಬೆಸೆದು ಸೇತುಬಂಧ ನಿರ್ಮಿಸಿ ಜನರ ಬಾಳಿಗೆ ಬೆಳಕಾಗುವುದರ ಜತೆಗೆ ಪ್ರೀತಿ, ವಿಶ್ವಾಸಗಳ ಸ್ನೇಹ ಸೇತು

ಕಟ್ಟಿದ್ದರು. ದ್ವೀಪದಂತಿದ್ದ ಜಾಗವನ್ನು ಮುಖ್ಯಭೂಮಿಗೆ ಸಂಪರ್ಕಿಸುವ ಕುಶಾಲನಗರ ತೂಗುಸೇತುವೆ ನಿರ್ಮಾಣ ಯಶಸ್ವಿಯಾದ ಬಳಿಕ ಹುಟ್ಟೂರು ಸುಳ್ಯ ಅರಂಬೂರಿನಲ್ಲಿ ಜನರ ಒತ್ತಾಯಕ್ಕೆ ಮಣಿದು ಪಯಸ್ವಿನಿ ನದಿಗೆ 87 ಮೀಟರ್ನ ತೂಗುಸೇತುವೆ ನಿರ್ಮಿಸಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ 1999ರಲ್ಲಿ 290 ಮೀಟರ್ ಉದ್ದದ ಸೇತುವೆ ನಿರ್ಮಿಸುವ ಮೂಲಕ ದಾಖಲೆ ಬರೆದರು. ಜೀವನದಲ್ಲಿ ಹಲವು ಏಳುಬೀಳು ಕಂಡ ಭಾರದ್ವಾಜರ ಜೈತ್ರಯಾತ್ರೆಯಲ್ಲಿ ಚರಿತ್ರೆ ಮೇಲೆ ಚರಿತ್ರೆ ಬರೆಯುತ್ತಾ ಸಾಗಿ ಮನೆಮಾತಾದರು.
2017ರಲ್ಲಿ ಸುಳ್ಯದ ಮುಕುಟಕ್ಕೆ ಪದ್ಮಶ್ರೀಯ ಗರಿಯನ್ನು ಮೂಡಿಸಿದರು.
ಪರಿಸರ ನಾಶವಿಲ್ಲದೆ. ದೊಡ್ಡ ಪ್ರಮಾಣದ ವೆಚ್ಚವಿಲ್ಲದೆ ಚಿಕ್ಕ ಬಜೆಟ್ನಲ್ಲಿ ನಾಡಿಗೆ ದೊಡ್ಡ ಕೊಡುಗೆ.. ಇದು ಗಿರೀಶ್ ಭಾರದ್ವಾಜ್ ತೂಗುಸೇತುವೆಯ ವಿಶೇಷತೆಯಾಗಿತ್ತು. ಮಲೆನಾಡು ಪ್ರದೇಶಗಳಲ್ಲಿ ನದಿ, ಹಳ್ಳ, ಕೊಳ್ಳಗಳು ಯಥೇಚ್ಛವಾಗಿವೆ. ಹಾಗಾಗಿ ಸಹಜವಾಗಿಯೇ ಸೇತುವೆಗಳ ಬೇಡಿಕೆಯೂ ಹೆಚ್ಚಿತ್ತು. ಅಗತ್ಯ ಇರುವಲ್ಲಿ ಸ್ಥಳ ಪರಿಶೀಲಿಸಿ, ಸರ್ವೇ ಮಾಡಿ ವೆಚ್ಚ ನಿರ್ಧರಿಸಿ ಅಂಥ ಜಾಗದಲ್ಲಿ ಸೇತುವೆ ನಿರ್ಮಿಸುವ ಪೂರ್ಣ ಜವಾಬ್ದಾರಿಯನ್ನು ಗಿರೀಶ್ ಭಾರದ್ವಾಜ್ ವಹಿಸಿಕೊಳ್ಳುತ್ತಿದ್ದರು. ಈಗ ದೊಡ್ಡ ಸೇತುವೆ ನಿರ್ಮಾಣವಾದ ಹಲವು ಪ್ರದೇಶಗಳಲ್ಲಿ ಗಿರೀಶರ ತೂಗು ಸೇತುವೆಗಳೇ ಮೊದಲು ನಾಡಿನ ಸಂಪರ್ಕ ಸಾಧನವಾಗಿತ್ತು. ತಮ್ಮ 70 ಸಹೋದ್ಯೋಗಿಗಳ ತಂಡದೊಂದಿಗೆ ತೂಗುಸೇತುವೆ ಕೆಲಸ ಆರಂಭವಾದಂದಿನಿಂದ ಕೆಲಸ ಮುಗಿಯುವ ತನಕ ಕಾಮಗಾರಿ ಸ್ಥಳದಲ್ಲಿನ ಟೆಂಟ್ನಲ್ಲಿ ಸಹೋದ್ಯೋಗಿಗಳೊಂದಿಗೆ ವಾಸಿಸುತ್ತದ್ದ ಗಿರೀಶ್ ಅವರು ಸದಾ ನಗುಮುಖದಿಂದ ಲವಲವಿಕೆಯಿಂದ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದರು.
ಹೃದಯಗಳ ಮಧ್ಯೆ ಸೇತು
ಹೀಗೂ ಸೇತುವೆ (ತೂಗು) ನಿರ್ಮಿಸಬಹುದು ಎಂಬುದು ದೊಡ್ಡ ಸುದ್ದಿಯಾಯಿತು. ನಮ್ಮೂರಲ್ಲೂ ಸೇತುವೆ ನಿರ್ಮಿಸಿ ಎಂದು ಜನ ಹಿಂದೆ ಬಿದ್ದರು. ಹಲವು ಸಂದರ್ಭಗಳಲ್ಲಿ ಹಳ್ಳಿಗರೇ ಒಟ್ಟಾಗಿ ಮನೆಮನೆಗೆ ತೆರಳಿ ಹಣ ಸಂಗ್ರಹಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡರು. ಹೀಗೆ

ತೂಗುಸೇತುವೆಗಳ ಮೂಲಕ ಹೊರಜಗತ್ತಿಗೆ ಸಂಪರ್ಕವನ್ನು ಕಲ್ಪಿಸಿ ಗ್ರಾಮೀಣ ಭಾಗಗಳ ಜನರ ಪಾಲಿನ ಆಶಾಕಿರಣವಾದ ಗಿರೀಶ್ ಭಾರದ್ವಾಜ್ ಜನರ ಹೃದಯಗಳನ್ನು ಗೆದ್ದಿದ್ದಾರೆ. ಆಂಧ್ರ, ಒಡಿಶಾಗಳಲ್ಲಿ ಸೇತುವೆ ನಿರ್ಮಾಣ ವಿರೋಧಿಸಿದ್ದ ನಕ್ಸಲ್ ಅನುಯಾಯಿಗಳೇ ಸೇತುವೆ ಎದ್ದುನಿಂತ ನಂತರ ಭಾರದ್ವಾಜ್ರ ಕಾಲುಮುಟ್ಟಿ ನಮಸ್ಕರಿಸಿ ಆನಂದಭಾಷ್ಪ ಸುರಿಸಿ ಬೀಳ್ಕೊಟ್ಟಿದ್ದರು. ಮಾನವೀಯತೆ, ಸ್ನೇಹದಿಂದ ಎಲ್ಲರನ್ನೂ ಗೌರವಿಸಿ ಪ್ರೀತಿ ಸಂಪಾದಿಸುವ ಮೂಲಕ ಹೃದಯಗಳ ಮಧ್ಯೆ ಸ್ನೇಹ ಸೇತು ನಿರ್ಮಿಸುವುದು ಭಾರದ್ವಾಜರ ಶೈಲಿಯಾಗಿತ್ತು.
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರಿನವರಾದ ಗಿರೀಶ್ ಭಾರದ್ವಾಜ್ ಅವರು ಬಿ.ಕೃಷ್ಣಭಟ್-ಲಕ್ಷ್ಮಿ ಅಮ್ಮ ದಂಪತಿ ಪುತ್ರನಾಗಿ 1950 ಮೇ 12ರಂದು ಜನಿಸಿದರು. ಮಂಡ್ಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಗ್ರಾಮೀಣ ಬದುಕಿಗೆ ಸಹಾಯವಾಗುವ ಕೃಷಿ ಯಂತ್ರೋಪಕರಣಗಳ ದುರಸ್ತಿ, ಗೋಬರ್ ಅನಿಲ ಸ್ಥಾವರ ಕಿರು ಉದ್ದಿಮೆ ಸ್ಥಾಪನೆ ಸೇರಿ ಉದ್ಯಮದಲ್ಲಿ ತೊಡಗಿಕೊಂಡರು. ಮೆಕಾನಿಕಲ್ ಇಂಜಿನಿಯರಿಂಗ್ ಕಲಿತ ಬಳಿಕ ತಂದೆಯ ಜತೆ ಕೃಷಿಯಲ್ಲಿ ಸಹಕಾರ ನೀಡುವುದರ ಜತೆಗೆ ಸುಳ್ಯದಲ್ಲಿ ವರ್ಕ್ಶಾಪ್ ತೆರೆದರು. ‘ನ್ಯಾಷನಲ್ ಇಂಜಿನಿಯರಿಂಗ್’ ಎಂಬ ಸಂಸ್ಥೆ ಜನರ ಜೀವನಾಡಿಯಾಯಿತು. ಮುಂದೆ ಅದು ‘ಆಯಶಿಲ್ಪ’ ಎಂದು ಮರು ನಾಮಕರಣಗೊಂಡು ಜನರಿಗೆ ಬಲು ಹತ್ತಿರವಾಗಿತ್ತು.
24 ವರ್ಷಗಳ ಸುದೀರ್ಘ ಅವಧಿಗೆ ಕರ್ನಾಟಕ ಗೃಹರಕ್ಷಕ ದಳದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಪ್ರಥಮ ಚಿಕಿತ್ಸೆ ತರಬೇತಿ ಮತ್ತು ಗೃಹರಕ್ಷಕ ದಳದ ಅಧಿಕಾರಿಗಳ ತರಬೇತಿ- ಎರಡರಲ್ಲೂ ಚಿನ್ನದ ಪದಕಗಳೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನ, ನವದೆಹಲಿಯಲ್ಲಿ ಅಗ್ನಿಶಮನ ತರಬೇತಿ ಯಶಸ್ವಿಯಾಗಿ ಪೂರೈಕೆ, ಸುಳ್ಯ ಘಟಕದ ಅಧಿಕಾರಿಯಾಗಿ ಹಾಗೂ ಕಂಪನಿ ಕಮಾಂಡರ್ ಆಗಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗ್ರಾಮಿಣ ಪ್ರದೇಶದಲ್ಲೂ ಕೂಡಾ ಅದ್ಭುತ ಸಾಧನೆ ಮಾಡಲು ಸಾಧ್ಯ ಎಂದು ತೊರಿಸಿಕೊಟ್ಟವರು ಗಿರೀಶರು.
ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆ, ಬೋರ್ಡ್ ಹೈಸ್ಕೂಲ್ ಸುಳ್ಯ ಮತ್ತು ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ವರೆಗಿನ ಶಿಕ್ಷಣ ಪೂರೈಸಿ ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಗಳಿಸಿ ಕೊಂಡರು. 1975ರಲ್ಲಿ ಸುಳ್ಯದ ಗಾಂಧಿನಗರದಲ್ಲಿ ‘ರೇಶನಲ್ ಇಂಜಿನಿಯರಿಂಗ್ ಇಂಡಸ್ಟ್ರೀಸ್’ ಎಂಬ ಉದ್ದಿಮೆಯನ್ನು ಸ್ಥಾಪಿಸಿ ಈ ಸಂಸ್ಥೆಯ ಬೆಳ್ಳಿ ಹಬ್ಬದ ಸಮಯದಲ್ಲಿ ಇದಕ್ಕೆ ‘ಆಯಶಿಲ್ಪ’ ಎಂಬ ನಾಮಕರಣ ಮಾಡಿಕೊಂಡರು.
ಆರಂಭದಲ್ಲಿ ಕೃಷಿ ಯಂತ್ರೋಪಕರಣಗಳ ದುರಸ್ತಿ, ವಾಹನ ರಿಪೇರಿ, ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಶನ್, ಗೋಬರ್ ಗ್ಯಾಸ್ ಪ್ಲಾಂಟ್ ರಚನೆಗೆ ಸೀಮಿತವಾಗಿದ್ದ ಇವರ ಔದ್ಯೋಗಿಕ ಚಟುವಟಿಕೆಗಳು 1989ರಿಂದ ಗ್ರಾಮೀಣ ತೂಗುಸೇತುವೆಗಳ ವಿನ್ಯಾಸ ಮತ್ತು ರಚನೆಯತ್ತ ಸಾಗಿದವು.
ಗ್ರಾಮೀಣ ಪ್ರದೇಶದಲ್ಲಿ ಹೊಳೆ, ತೊರೆಗಳು ಇರುವಲ್ಲಿ, ಮಳೆಗಾಲದಲ್ಲಿ ಜನರು, ಶಾಲಾಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ಬರುವ ಬವಣೆ, ರಾತ್ರಿ ಹೊತ್ತು ದೋಣಿ ಇಲ್ಲದಾಗ ಅವರು ಪಡುವ ಪಾಡು, ಹೊಳೆಯಲ್ಲಿ ನೀರಿನಮಟ್ಟ ಏರಿದಾಗ ಉಂಟಾಗುವ ಸಂಪರ್ಕ ಕಡಿತ ಇವುಗಳೆಲ್ಲವುಗಳಿಗೆ ಗಿರೀಶರು ರೂಪಿಸಿದ ಪರಿಹಾರವೇ ತೂಗು ಸೇತುವೆಗಳ ರಚನೆ.
1976ರಿಂದಲೇ ರೋಟರಿಕ್ಲಬ್ನ ಸದಸ್ಯರಾಗಿರುವ ಇವರು 1988-89ರ ಸಾಲಿನಲ್ಲಿ ಅದರ ಅಧ್ಯಕ್ಷರಾಗಿದ್ದರು. ಸ್ನೇಹ ಶಿಕ್ಷಣ ಸಂಸ್ಥೆ, ವಿವೇಕಾನಂದ ಶಿಕ್ಷಣ ಸಂಸ್ಥೆ ವಿನೋಬನಗರ, ಪುತ್ತೂರು ಕೈಗಾರಿಕಾ ಸಂಘ ಹಾಗೂ ಸಣ್ಣ ಕೈಗಾರಿಕಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪದ್ಮಶ್ರೀ ಪ್ರಶಸ್ತಿ ಅಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಿಎನ್ಎನ್ ಐಬಿಎನ್ ಚಾನೆಲ್ 2008ರಲ್ಲಿ ಪ್ರಥಮವಾಗಿ ಕೊಡ ಮಾಡಿದ ಸಿಟಿಜನ್ ಜರ್ನಲಿಸ್ಟ್ ಪ್ರಶಸ್ತಿ ಸೆರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.







