ನವದೆಹಲಿ: ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾದ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ ‘ಟೈಮ್ಡ್ ಓಟ್’ ರೀತಿಯಲ್ಲಿ ಔಟಾಗಿದ್ದಾರೆ.ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಈ ರೀತಿ ಔಟಾದ ಮೊದಲ ಕ್ರಿಕೆಟಿಗರಾಗಿದ್ದಾರೆ. ಲಂಕಾ ಇನ್ನಿಂಗ್ಸ್ನ 25ನೇ ಓವರ್ನ ಎರಡನೇ ಎಸೆತದಲ್ಲಿ ಸದಿರ ಸಮರವಿಕ್ರಮ ವಿಕೆಟ್ ಪತನವಾಯಿತು. ಆ ಬಳಿಕ ಕ್ರೀಸ್ಗಿಳಿದ ಮ್ಯಾಥ್ಯೂಸ್ ಚೆಂಡನ್ನು
ಎದುರಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಇದನ್ನು ಗಮನಿಸಿದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್, ಮ್ಯಾಥ್ಯೂಸ್ ವಿರುದ್ಧ ಅಂಪೈರ್ ಬಳಿ ಟೈಮ್ ಔಟ್ ಮನವಿ ಮಾಡಿದರು. ಬಾಂಗ್ಲಾ ನಾಯಕನ ಮನವಿ ಪುರಸ್ಕರಿಸಿದ ಆನ್ಪೀಲ್ಡ್ ಅಂಪೈರ್, ಮ್ಯಾಥ್ಯೂಸ್ ಔಟೆಂದು ತೀರ್ಪು ನೀಡಿದರು. ಕೆಲ ಸಮಯ ಅಂಪೈರ್ ಜತೆ ವಾಗ್ವಾದಕ್ಕಿಳಿದ ಮ್ಯಾಥ್ಯೂಸ್ ಪೆವಿಲಿಯನ್ಗೆ ಮರಳಬೇಕಾಯಿತು.
ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಟೈಮ್ ಔಟ್ ಆದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಯಾವುದೇ ಬ್ಯಾಟ್ಸ್ಮನ್ ಈ ರೀತಿ ಔಟಾಗಿರಲಿಲ್ಲ. ಮ್ಯಾಥ್ಯೂಸ್ ಬ್ಯಾಟಿಂಗ್ಗೆ ಬಂದಾಗ ಅವರ ಹೆಲ್ಮೆಟ್ ಕಟ್ಟಿದ್ದ ಪಟ್ಟಿ ಹರಿದಿತ್ತು. ಇದನ್ನು ಗಮನಿಸಿದ
ಮ್ಯಾಥ್ಯೂಸ್, ಬೇರೆ ಹೆಲ್ಮೆಟ್ ತರುವಂತೆ ಡಗೌಟ್ಗೆ ಸನ್ನೆ ಮಾಡಿದರು. ಆದರೆ ಆ ವೇಳೆಗಾಗಲೇ ಮ್ಯಾಥ್ಯೂಸ್ ಮೈದಾನಕ್ಕೆ ಬಂದು 2 ನಿಮಿಷಕ್ಕೂ ಹೆಚ್ಚು ಸಮಯ ಕಳೆದಿತ್ತು. ಇದನ್ನು ಗಮನಿಸಿದ ಬಾಂಗ್ಲಾದೇಶ ನಾಯಕ ಹಸನ್, ಮ್ಯಾಥ್ಯೂಸ್ ವಿರುದ್ಧ ಟೈಮ್ ಔಟ್ ಮನವಿ ಮಾಡಿದರು. ನಿಯಮಗಳ ಪ್ರಕಾರ, ಒಬ್ಬ ಬ್ಯಾಟರ್ ಔಟಾದ ಬಳಿಕ ಹೊಸ ಬ್ಯಾಟ್ಸ್ಮನ್ ಎರಡು ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧರಾಗಿರಬೇಕು. ಆದರೆ ಮ್ಯಾಥ್ಯೂಸ್ಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂಪೈರ್ ಔಟ್ ನೀಡಬೇಕಾಯಿತು. ಒಂದು ವೇಳೆ ಬಾಂಗ್ಲಾದೇಶದ ನಾಯಕ ಹಸನ್, ಇಲ್ಲಿ ಮ್ಯಾಥ್ಯೂಸ್ ಔಟ್ಗೆ ಮನವಿ ಮಾಡದಿದ್ದರೆ ಮ್ಯಾಥ್ಯೂಸ್ ಔಟಾಗುತ್ತಿರಲಿಲ್ಲ.











