ಸುಳ್ಯ:ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ಸಂಭ್ರಮಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಸಾಹಿತ್ಯ ಸಂಭ್ರಮ – 2023 ಸಪ್ತಾಹದ ಅಂಗವಾಗಿ ಏಳನೇ ಕಾರ್ಯಕ್ರಮ ಕನ್ನಡದ ಕಿರಣ ಕುತ್ಯಾಳ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು. ಜ್ಞಾನ ಪೀಠ ಪ್ರಶಸ್ತಿ ಪುಸ್ಕೃತ ಕುವೆಂಪು ನೆನಪು ಮತ್ತು

ಗಾಯನ ಕಾರ್ಯಕ್ರಮ ಸಂಧ್ಯಾರಶ್ಮಿ ಸಾಹಿತ್ಯ ಸಂಘ ಸುಳ್ಯ ಇದರ ಸಹಯೋಗದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಾಡಿನ ಹಿರಿಯ ಕವಿ ಕಿರಣ ಕಾವ್ಯನಾಮಾಂಕಿತ ಕುತ್ಯಾಳ ನಾಗಪ್ಪ ಗೌಡರ ಕೃತಿಗಳ ಪರಿಚಯ ಹಾಗೂ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಾಡಿನ ಹಿರಿಯ ಕವಿ ಜಿ.ಎಸ್. ಉಬರಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರ ಹಾಗೂ ಕವಿ ಕಿರಣರ ಕುರಿತ ಒಡನಾಟವನ್ನು ಮೆಲುಕು ಹಾಕಿದರು.
ಸನ್ಮಾನಕ್ಕುತ್ತರಿಸಿ ಮಾತನಾಡಿದ ಕಿರಣರು ಯಾವುದೇ ವಿಚಾರದಲ್ಲಿ ವೈಭವೀಕರಣದ ಅಗತ್ಯವಿರುವುದಿಲ್ಲ ಪ್ರಾಮಾಣಿಕವಾದ ಪ್ರಯತ್ನವು ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಬಲ್ಲದು ಎಂದು ನುಡಿದರು.
ಕಿರಣರ ಕೃತಿಗಳ ಪರಿಚಯ ಮಾಡಿದ ಲೇಖಕಿ ಚಂದ್ರಾವತಿ ಬಡ್ಡಡ್ಕ ಇವರು ಕಿರಣರ ಕವಿತೆಗಳಲ್ಲಿ ನವೋದಯದ ಸೊಗಸು ಹಾಗೂ ನವ್ಯದ
ಕಂಪುಗಳೆರಡು ಮಿಳಿತವಾಗಿದ್ದು ಇವರೊಬ್ಬ ವಿಶೇಷ ಕವಿ ಹಾಗೂ ಅನುಭವಜನ್ಯವಾಗಿರುವ ಪ್ರತಿಮಾ ಸ್ವರೂಪಿ ಕವಿತೆಗಳು ಸತ್ವಪೂರ್ಣವಾಗಿದೆ ಎಂದು ಹೇಳಿ ಕಿರಣರ ಕಾವ್ಯದ ಹೊಂಗಿರಣಗಳು ಕನ್ನಡ ಸಾಹಿತ್ಯವನ್ನು ಬೆಳಗಿವೆ ಎಂದರು.
ಭಾವನಾ ಸುಗಮ ಸಂಗೀತ ಬಳಗದ ಅಧ್ಯಕ್ಷರಾದ ಶ್ರಿ ಕೆ ಆರ್ ಗೋಪಾಲಕೃಷ್ಣ ಅವರು ಕುವೆಂಪುರವರ ಸಾಹಿತ್ಯವನ್ನು ಮೆಲುಕು ಹಾಕಿ ಅವರ ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕುವೆಂಪು ಸ್ಮರಣೆ ಹಾಗೂ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಪೇರಾಲು ವಹಿಸಿದ್ದರು. ಸಂಧ್ಯಾರಶ್ಮಿ ಪಿಂಚಣಿದಾರರು ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಎಸ್ ರಂಗಯ್ಯ ಹಾಗೂ ಗೌರವಾಧ್ಯಕ್ಷ ಬಾಬುಗೌಡ ಅಚ್ರಪ್ಪಾಡಿ ಇವರುಗಳು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಸಂಧ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷೆ ಸಾಹಿತಿ ಲೀಲಾ ದಾಮೋದರ್ ಸ್ವಾಗತಿಸಿದರು. ಖಜಾಂಜಿ ಕೇಶವ ಸಿ ಎ ವಂದಿಸಿದರು. ಉಪಾಧ್ಯಕ್ಷ ರಾಮಚಂದ್ರ ಪಳ್ಳತಡ್ಕ ಕಾರ್ಯಕ್ರಮ ನಿರೂಪಿಸಿದರು.











