ಸುಳ್ಯ:ಸುಳ್ಯದಲ್ಲಿ ಕೃಷಿಯ ಜೊತೆಗೆ ಕೈಗಾರಿಕೆಗಳು ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಸುಳ್ಯದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಬೇಕು ಎಂದು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ -‘ಮಾಸ್ ಲಿಮಿಟೆಡ್’ನ ಸುಳ್ಯ ಶಾಖೆಯಲ್ಲಿ ಅಡಿಕೆ ಸಂಸ್ಕರಣಾ ಘಟಕವನ್ನು ಉದ್ಘಾಟಿಸಿ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಳದಿ ರೋಗ, ಎಲೆಚುಕ್ಕಿ ರೋಗ ಬಾಧೆಯಿಂದ ಅಡಿಕೆ ಕೃಷಿ

ವಿನಾಶದ ಅಂಚಿನಲ್ಲಿರುವ ಇಂದಿನ ದಿನಗಳಲ್ಲಿ ಕೃಷಿಕರಿಗೆ ಆಶಾ ಕಿರಣವಾಗಿ ಮಾಸ್ ಸಂಸ್ಥೆ ಬೆಳೆಯುತಿದೆ. ಮಾಸ್ ಅಧ್ಯಕ್ಷರೂ, ಹಿರಿಯ ಸಹಕಾರಿಗಳೂ ಆದ ಸೀತಾರಾಮ ರೈ ಸವಣೂರು ಅವರ ದೂರ ದೃಷ್ಠಿಯ ಫಲವಾಗಿ ಮಾಸ್ ಅಡಿಕೆ ಸಂಸ್ಕರಣಾ ಘಟಕವನ್ನು ಆರಂಭಿಸಿದೆ. ಇದರಿಂದ ಅಡಿಕೆ ಕೃಷಿಗೆ ಉತ್ತಮ ದರ ದೊರೆಯುವದರ ಜೊತೆಗೆ ಹೆಚ್ಚು ಉದ್ಯೋಗ ಸೃಷ್ಠಿಯೂ ಆಗಲಿದೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಹಾಗೂ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ ಜಿಲ್ಲೆಯ ಕೃಷಿ, ಸಹಕಾರಿ ಕ್ಷೇತ್ರದಲ್ಲಿ ಮಾಸ್ ಬೆಳೆಯುತಿದೆ. ವಿವಿಧ ಕಡೆ ಶಾಖೆಗಳನ್ನು ತೆರೆದು, ಅಡಿಕೆ ಸಂಸ್ಕರಣಾ ಘಟಕ ಸ್ಥಾಪನೆ ಮಾಡಿ ರೈತರು ಬೆಳೆದ ಅಡಿಕೆಗೆ ಉತ್ತಮ ದರ ದೊರಕಿಸುವ ನಿಟ್ಟಿನಲ್ಲಿ ಸೀತಾರಾಮ ರೈ ಅವರ ನೇತೃತ್ವದಲ್ಲಿ ಮಾಸ್ ಉತ್ತಮ ಕೆಲಸ ಮಾಡುತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಸ್ ಲಿಮಿಟೆಡ್ನ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ಮಾಸ್ ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಡಿಕೆ ಕೃಷಿಕರ ಹಿತ ಸಂರಕ್ಷಿಸುವ ಸಲುವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.ಸಂಸ್ಥೆಯು ಉತ್ತರೋತ್ತರ ಪ್ರಗತಿ, ಯಶಸ್ಸು ಸಾಧಿಸುವುದರೊಂದಿಗೆ ಸದಸ್ಯ ಬಾಂಧವರ ಹಿತರಕ್ಷಣೆಗೆ ಪಣತೊಟ್ಟು ಕಾರ್ಯನಿರ್ವಹಿಸಲಾಗುತಿದೆ. ಅಡಿಕೆ ಸಂಸ್ಕರಣಾ ಘಟಕ ಆರಂಭಿಸುವುದರ ಮೂಲಕ
ಸುಳ್ಯ,ಪುತ್ತೂರು,ಕಡಬ ತಾಲೂಕುಗಳ ಶಾಖೆಗಳಲ್ಲಿ ಖರೀದಿಸಲಾಗುವ ಅಡಿಕೆಗಳನ್ನು ಸುಳ್ಯ ಶಾಖೆಯಲ್ಲಿ ಸಂಸ್ಕರಣೆ ಮಾಡಿ ಪ್ಯಾಕ್ ಮಾಡಿ ಕಳುಹಿಸಲಾಗುವುದು. ಮೊದಲು ಇಲ್ಲಿ ಖರೀದಿಸಿದ ಅಡಿಕೆಯನ್ನು ಬೈಕಂಪಾಡಿಯ ಸಂಸ್ಕರಣಾ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಇನ್ನು ಇಲ್ಲಿಯೇ ಸಂಸ್ಕರಣ ಮಾಡಲಾಗುತ್ತದೆ.ಇದರಿಂದ ಸಾಗಾಟ ವೆಚ್ಚ ಮತ್ತಿತರ

ಖರ್ಚು ಕಡಿಮೆ ಮಾಡಬಹುದು ಎಂದು ಹೇಳಿದರು.ಕಾವು, ನಿಂತಿಕಲ್ಲು ಶಾಖೆ, ಸಂಸ್ಕರಣಾ ಘಟಕ ತೆರೆಯಲಾಗಿದೆ. ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸಂಸ್ಥೆಯ ವಹಿವಾಟು ಶೇಖಡ 40ರಷ್ಟು ವೃದ್ಧಿಯಾಗಿರುತ್ತದೆ.ಮಾಸ್ ಸಂಸ್ಥೆಯ ಮೂಲಕ ಕೃಷಿಕರ ಅಡಿಕೆಗೆ ಇನ್ನಷ್ಟು ಅಧಿಕ ದರ ದೊರೆಯುವಂತೆ ಮಾಡುವುದು. ಕೃಷಿಕರ ಶ್ರೇಯಾಭಿವೃದ್ಧಿ ಮಾಸ್ ಉದ್ದೇಶ ಎಂದು ಸೀತಾರಾಮ ರೈ ಹೇಳಿದರು.
ಮುಖ್ಯ ಅತಿಥಿಯಾಗಿದ್ದ.ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಎಸ್.ಎನ್.ಮನ್ಮಥ ಮಾತನಾಡಿ ‘ ಮಾಸ್ ಸಂಸ್ಥೆ ಹಲವು ಶಾಖೆಗಳನ್ನು ತೆರೆದು ಇದೀಗ ಅಡಿಕೆ ಸಂಸ್ಕರಣಾ ಘಟಕ ಆರಂಭಿಸುವ ಮೂಲಕ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ ಎಂದು ಹೇಳಿದರು. ಕೃಷಿಕರಿಗೆ ಮಾಸ್ ಆಶಾಕಿರಣವಾಗಿ ಮೂಡಿ ಬಂದಿದ್ದು ರೈತರ ಬೆಳೆಗೆ ಉತ್ತಮ ದರ, ಉದ್ಯೋಗ ಸೃಷ್ಠಿಯ ಅವಕಾಶವನ್ನು ಸೃಷ್ಠಿಸಿದೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈ,
ಮಾತನಾಡಿ ‘ ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಘಟಕ ಆರಂಭಿಸಿರುವುದು ಉತ್ತಮ ಬೆಳವಣಿಗೆ, ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಮಾಸ್ ಚೆನ್ನಾಗಿ ಬೆಳೆಯುತಿದೆ. ಬೆಲೆ, ಬೆಳೆ ಸ್ಥಿರತೆ ಇಲ್ಲದೆ ಕೃಷಿ ವಲಯ ಸೊರಗಿದೆ ಇದಕ್ಕೆ ಪರಿಹಾರವಾಗಿ ಬೆಳೆಗೆ ನಿಯಂತ್ರಣ, ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ಕೃಷಿಗೆ ಸ್ಥಿರತೆ ನೀಡಲು ಸರಕಾರ ಪ್ರಯತ್ನಿಸಬೇಕು ಎಂದು ಹೇಳಿದರು.

ಎಪಿಎಂಸಿ ಕಾರ್ಯದರ್ಶಿ ಎಸ್. ರವೀಂದ್ರ, ಮಾಸ್ ನಿರ್ದೇಶಕರಾದ ಶ್ರೀರಾಮ ಪಾಟಾಜೆ, ಪುಷ್ಪರಾಜ ಅಡ್ಯಂತಾಯ, ಸುಧಾ ಎಸ್.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಸ್ ಲಿಮಿಟೆಡ್ನ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿ,ಮಾಸ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್ ವಂದಿಸಿದರು. ಸವಣೂರು ಸಿಎ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು.ಮಾಸ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ಸುಳ್ಯ ಶಾಖಾಧಿಕಾರಿ ಧನಂಜಯ. ಎಂ.ಎನ್.ಮತ್ತಿತರರು ಉಪಸ್ಥಿತರಿದ್ದರು.
