ರಾವಲ್ಪಿಂಡಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಆತಿಥೇಯ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಗುರುವಾರ ಆಡಲಿದ್ದ ಪಂದ್ಯವು ಮಳೆಯಿಂದಾಗಿ ರದ್ದಾಯಿತು.ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಾದಿಯಿಂದ ಎರಡೂ ತಂಡಗಳು ಹೊರಬಿದ್ದಿದೆ.29 ವರ್ಷಗಳ ನಂತರ ಪಾಕಿಸ್ತಾನವು ಐಸಿಸಿ ಟ್ರೋಫಿ ಟೂರ್ನಿಯನ್ನು ಆಯೋಜಿಸಿದೆ. ಆದರೆ ಎ ಗುಂಪು ಹಂತದಲ್ಲಿ ಒಂದೇ ಒಂದು ಪಂದ್ಯವನ್ನೂ
ಜಯಿಸದೇ ಹೊರಬಿದ್ದಿತು. ಮೊದಲೆರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಮತ್ತು ಭಾರತದ ಎದುರು ಸೋತಾಗಲೇ ಮೊಹಮ್ಮದ್ ರಿಜ್ವಾನ್ ನಾಯಕತ್ವದ ಪಾಕ್ ಹೊರಬಿದ್ದಿತ್ತು. ಬಾಂಗ್ಲಾ ಎದುರು ಸಮಾಧಾನಕ ಜಯಗಳಿಸುವ ಯೋಚನೆಯಲ್ಲಿತ್ತು. ಆದರೆ ಅದಕ್ಕೆ ಮಳೆ ಆಸ್ಪದ ಕೊಡಲಿಲ್ಲ. ಬಾಂಗ್ಲಾ ಕೂಡ ಕಳೆದ ಎರಡೂ ಪಂದ್ಯಗಳಲ್ಲಿ ಸೋತಿತ್ತು. ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು.ಈ ಟೂರ್ನಿಯಲ್ಲಿ ಮಳೆಯಿಂದಾಗಿ ರದ್ದಾಗಿರುವ ಎರಡನೇ ಪಂದ್ಯ ಇದಾಗಿದೆ. ರಾವಲ್ಪಿಂಡಿಯಲ್ಲಿಯೇ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ಪಂದ್ಯವೂ ಈಚೆಗೆ ರದ್ಧಾಗಿತ್ತು.