ಸುಳ್ಯ: ಮನೋಶಕ್ತಿಯನ್ನು ಗಟ್ಟಿಗೊಳಿಸಲು ಮತ್ತು ಮನೋಶಕ್ತಿಯನ್ನು ಜಾಗೃತಗೊಳಿಸಿ ಬದುಕಿನಲ್ಲಿ ಯಶಸ್ಸು ಗಳಿಸಲು ಮಾರ್ಗದರ್ಶನ ನೀಡುವ ಉಪಾಸನಾ ಫೌಂಡೇಷನ್ ನೇತೃತ್ವದಲ್ಲಿ ಸದ್ಗುರು ಶ್ರೀರಾಮರವರ ದಿವ್ಯ ಮಾರ್ಗದರ್ಶನದಲ್ಲಿ ಮನೋಶಕ್ತಿ ಕಾರ್ಯಾಗಾರ ಫೆ.9ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯಭವನದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಗುರುಗಳಾದ

ಕುಂಡಲಿನಿಯೋಗಿ ಸದ್ಗುರು ಶ್ರೀ ರಾಮರವರು ನಡೆಸಿಕೊಡುವ
ಮನೋಶಕ್ತಿ ಕಾರ್ಯಾಗಾರ ಅಯೋಜಿಸಲಾಗಿತ್ತು. ಸ್ವಸ್ಥ ವ್ಯಕ್ತಿ, ಸ್ವಸ್ಥ ಕುಟುಂಬ ಮತ್ತು ಸ್ವಸ್ಥ ಸಮಾಜ ನಿರ್ಮಾಣದ ಧ್ಯೇಯವನ್ನು ಇಟ್ಟುಕೊಂಡು ನಡೆದ ಕಾರ್ಯಾಗಾರದಲ್ಲಿ ಸಂಕಲ್ಪದ ಸರಿಯಾದ ಕ್ರಮ
ಸುಪ್ತವಾದ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸುವುದು
ಮನೋಶಕ್ತಿಯ ಅರಿವು ಹಾಗೂ ಅದನ್ನು ಬಳಸಿ ಯಶಸ್ಸು ಗಳಿಸುವುದು ಹೇಗೆ? ಶ್ವಾಸಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಮುದ್ರೆ, ಗುರಿಯ ನಿರ್ಣಯ, ನಿರ್ಣಯಿಸಿದ ಗುರಿಯನ್ನು ತಲುಪುವ ಹಾದಿ, ಭಾವನೆ ಹಾಗೂ

ಬದುಕನ್ನು ಯಾವ ರೀತಿ ದೃಢಪಡಿಸುವುದು ಸೇರಿದಂತೆ
ವಿವಿಧ ವಿಚಾರಗಳ ಬಗ್ಗೆ ಅವರು ಮಾರ್ಗದರ್ಶನ ನೀಡಿದರು. ಸದ್ಗುರು ಶ್ರೀಯವರ ನೇರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಗಾರಕ್ಕೆ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಯಿಂದ ಜನರು ಆಗಮಿಸಿದ್ದರು.
ಕಾರ್ಯಾಗಾರದ ಉದ್ಘಾಟನೆ:
ಕಾರ್ಯಾಗಾರವನ್ನು ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾಧರ ಡಿ.ವಿ.ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ
ಅವರು ಮಾತನಾಡಿ ‘ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನಸ್ಸಿಗೆ ಮತ್ತು ಮಿದುಳಿಗೆ ಹೆಚ್ಚು ಕೆಲಸ. ಆದುದರಿಂದ ನಮ್ಮ ಮಿದುಳು, ಹೃದಯ, ಮನಸ್ಸು ಶಕ್ತಿಯುಯವಾಗಿರಲು ಮತ್ತು ಅದು ನಮ್ಮ ನಿಯಂತ್ರಣದಲ್ಲಿರಲು ಈ ರೀತಿಯ ಕಾರ್ಯಾಗಾರ ಅತೀ ಅಗತ್ಯ. ದೇಹ, ಮಿದುಳು ಮತ್ತು ಹೃದಯ ಒಂದಾಗಿ ಕೆಲಸ ಮಾಡಬೇಕು. ಆ ಮೂಲಕ ಆರೋಗ್ಯವಂತ ಮನಸ್ಸು ಮತ್ತು ದೇಹ ಇರಲು ಸಾಧ್ಯ ಎಂದರು.

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಹಿರಿಯರಾದ ನೂಜಾಲು ಪದ್ಮನಾಭ ಗೌಡ, ರಾಮಣ್ಣ ಗೌಡ, ಕಾರ್ಯಾಗಾರದ ಸಂಘಟಕರಾದ ಧರ್ಮತೇಜ ಎನ್.ಪಿ. ಉಪಸ್ಥಿತರಿದ್ದರು. ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರಕ್ಕೆ ಮುನ್ನ ದೀಪಾಂಜಲಿ ಮಹಿಳಾ ಮಂಡಲದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
