ಮಂಗಳೂರು:ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳ ಸಂಪರ್ಕ ಕೊಂಡಿಯಾಗಿರುವ ರಾ.ಹೆ. 275ರ ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರವು 49.22 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಈ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಕೋರಿ
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ನವದೆಹಲಿಯಲ್ಲಿ ಭೇಟಿ ಮಾಡಿದ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾಣಿ-ಸಂಪಾಜೆ ವಿಭಾಗದ ಒಟ್ಟು 71.60 ಕಿ.ಮೀ. ರಸ್ತೆಯ ವಿಶೇಷ ತುರ್ತು ದುರಸ್ತಿ ಕಾಮಗಾರಿಗಾಗಿ ಇಪಿಸಿ ಮಾದರಿಯಲ್ಲಿ ಒಟ್ಟು 49.22 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಇಡೀ ರಸ್ತೆಗೆ 40 ಮಿ.ಮೀ ದಪ್ಪದ ಬಿಟುಮಿನಸ್, ರಸ್ತೆ ಇಕ್ಕೆಲಗಳ ನಿರ್ವಹಣೆ, ಸಂಚಾರ ಸೂಚಕ ಫಲಕಗಳು ಮತ್ತು ರೋಡ್ ಮಾರ್ಕಿಂಗ್ ಸೇರಿದಂತೆ ಅಗತ್ಯ ಅಭಿವೃದ್ದಿ ಕಾಮಗಾರಿಗಳು ನಡೆಯುವ ಸಾಧ್ಯತೆ ಇದ್ದು, ಸಚಿವಾಲಯದಿಂದ ಆರ್ಥಿಕ ಮಂಜೂರಾತಿ ಮತ್ತು ಟೆಂಡರ್ ದಾಖಲೆಗಳ ಅನುಮೋದನೆ ಸಿಕ್ಕ ತಕ್ಷಣವೇ ಅತ್ಯಂತ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಇದರ ಜೊತೆಯಲ್ಲೇ, ಈ ಹೆದ್ದಾರಿಯನ್ನು ಪೇವ್ಡ್ ಶೋಲ್ಡರ್ ಒಳಗೊಂಡ ಚತುಷ್ಪಥ (4-ಲೇನ್) ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಯನ್ನು ಈಗಾಗಲೇ 2026-27ರ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದ್ದು, ಪ್ರಸ್ತುತ ಇದರ ವಿಸ್ತೃತ ಯೋಜನಾ ವರದಿ (DPR) ಸಿದ್ಧತೆಯ ಹಂತದಲ್ಲಿದ್ದು ಶೀಘ್ರದಲ್ಲೇ ರಸ್ತೆ ವಿನ್ಯಾಸಕ್ಕೆ (Alignment) ಅನುಮೋದನೆ ಸಿಗುವ ನಿರೀಕ್ಷೆಯಿದೆ ಎಂದು ಚೌಟ ತಿಳಿಸಿದ್ದಾರೆ.
ಕರಾವಳಿ ಮತ್ತು ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸಿ ವಾಹನ ಸಂಚಾರ ಸುಗಮಗೊಳಿಸುವ ಅತ್ಯಂತ ನಿರ್ಣಾಯಕ ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿರುವ NH-275ರ ಮಾಣಿ-ಸಂಪಾಜೆ ರಸ್ತೆಯ ಮೇಲ್ದರ್ಜೀಕರಣ ಯೋಜನೆಗೆ ಶೀಘ್ರದಲ್ಲೇ ಅಲೈನ್ಮೆಂಟ್ ಅನುಮೋದನೆ ಮತ್ತು ಹಾಗೂ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಒತ್ತಾಯಿಸಿದ್ದಾರೆ. ಈ ಮಾರ್ಗದಲ್ಲಿ ಸಂಚಾರ ಸುರಕ್ಷತೆ ಹೆಚ್ಚಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಈ ಯೋಜನೆ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕಾದ ಅತ್ಯಗತ್ಯತೆಯಿದೆ ಎಂದು ಕ್ಯಾ. ಚೌಟ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿದ್ದಾರೆ.
ಇದೇ ವೇಳೆ, ಮಂಗಳೂರು -ಬೆಂಗಳೂರು ಎಕ್ಸ್ಪ್ರೆಸ್ ವೇಗೆ ಸಂಬಂಧಿಸಿದಂತೆಯೂ ಚರ್ಚಿಸಿದ್ದು, ಈ ಯೋಜನೆಯ ಮಹತ್ವದ ಭಾಗವಾಗಿರುವ ಶಿರಾಡಿ ಘಾಟ್ ವಿಭಾಗದ ನೂತನ ರಸ್ತೆ ವಿನ್ಯಾಸಕ್ಕೆ ’ಅಲೈನ್ಮೆಂಟ್ ಅಪ್ರೂವಲ್ ಕಮಿಟಿ’ ಅನುಮೋದನೆಯನ್ನು ಕ್ಯಾ. ಚೌಟ ಶ್ಲಾಘಿಸಿದ್ದಾರೆ. ಪ್ರಸ್ತುತ ಈ ಯೋಜನೆಯು ಡಿಪಿಆರ್ ತಯಾರಿ ಹಂತದಲ್ಲಿದ್ದು, ಇದರೊಂದಿಗೆ ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆ ಅನುಮತಿ ಪಡೆಯುವ ಪ್ರಕ್ರಿಯೆಗಳು ಕೂಡ ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದ್ದಾರೆ.







