ಸುಳ್ಯ:ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ರಾಷ್ಟ್ರ ಮಟ್ಟದ ಕೆವಿಜಿಸಿಇ ಹ್ಯಾಕ್ ವೈಸ್ – 2025 ಕಾರ್ಯಕ್ರಮ ಸಮಾಪನಗೊಂಡಿತು. ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಿರಂತರ 24 ಗಂಟೆಗಳ ಕಾಲ ಸ್ಪರ್ಧೆ ನಡೆಯಿತು. ಮಹಾರಾಷ್ಟ್ರ ಕೇರಳ, ತಮಿಳುನಾಡು ಹೀಗೆ ರಾಜ್ಯದ ನಾನಾ ಭಾಗದ ಸುಮಾರು 90 ತಂಡಗಳು ನೋಂದಾಯಿಸಿ ಅದರಲ್ಲಿ ಆಯ್ಕೆಗೊಂಡ
25 ತಂಡಗಳು ಭಾಗವಹಿಸಿದವು. ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಶ್ರೀ ಮೌರ್ಯ ಆರ್. ಕುರುಂಜಿ ಉದ್ಘಾಟಿಸಿದ ಎರಡು ದಿನಗಳ ಕಾರ್ಯಕ್ರಮ ಎ.26ರಂದು ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀಮುಖ ಮಾತನಾಡಿ ವಿದ್ಯಾರ್ಥಿಗಳು ಪ್ರತಿಯೊಂದು

ಕ್ಷೇತ್ರದಲ್ಲಿ ಭಾಗವಹಿಸುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಸವಾಲುಗಳು ಬಂದಲ್ಲಿ ಅದನ್ನು ಎದುರಿಸುವಂತಹ ಸಾಮರ್ಥ್ಯವನ್ನು ಅವರು ಪಡೆಯಲು ಸಾಧ್ಯವಾಗುತ್ತದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ವಿ, ಉಪಪ್ರಾಂಶುಪಾಲ ಡಾ.ಶ್ರೀಧರ್, ಕಾರ್ಯಕ್ರಮದ ಸಂಚಾಲಕರು ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಡಾ.ಚಂದ್ರಶೇಖರ ಎ ಮತ್ತಿತರರು ವಿಜೇತರಿಗೆ ಬಹುಮಾನ ವಿತರಿಸಿದರು.
ನಿರ್ಣಾಯಕರಾದ ಅನಂತ ಪಿ. ಮಲ್ಯ, ವಿಜೇತರ ಪಟ್ಟಿ ವಾಚಿಸಿದರು.