ಸುಳ್ಯ: ವಿಶ್ವ ನೃತ್ಯ ದಿನದ ಅಂಗವಾಗಿ ಗುರುದೇವ ಲಲಿತಕಲಾ ಅಕಾಡೆಮಿ ವತಿಯಿಂದ ಎ.29ರಂದು ವಿಶ್ವ ನೃತ್ಯ ದಿನ 2025 ಸುಳ್ಯ ತಾಲೂಕಿನ ಕನಕಮಜಲಿನ ಕನಕ ಕಲಾ ಗ್ರಾಮದಲ್ಲಿ ನಡೆಯಲಿದೆ. ಇದರ ಅಂಗವಾಗಿ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗಿನಿಂದ ಪರಿಚಯ, ಯೋಗ ಮತ್ತು ಫಿಟ್ನೆಸ್, ನೃತ್ಯ, ಅಭಿನಯ, ಚರ್ಚೆಗಳು ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ
ಗುರುದೇವ ಲಲಿತ ಕಲಾ ಅಕಾಡೆಮಿಯ ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ಪಿ.ಎಂ, ಮಿಸ್ ಇನೆಸ್ ಪೆಕ್ವಿಟೋ ಪೋರ್ಚುಗಲ್ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಯಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧಿಕಾರಿ ಸಂಪತ್ ಕುಮಾರ್, ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರ್, ಭರತನಾಟ್ಯ ಕಲಾವಿದೆ ಮಂಜುಶ್ರೀ ರಾಘವ್, ಕನಕಮಜಲು ಗ್ರಾ.ಪಂ.ಅಧ್ಯಕ್ಷೆ ಶಾರದಾ ಉಗ್ಗಮೂಲೆ, ಕೊಳ್ತಿಗೆ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ತೀರ್ಥಾನಂದ ದುಗ್ಗಲ, ಪಿ.ಎಂ.ನಾಗಪ್ಪ ಗೌಡ ಮೂರ್ಜೆ ಹಾಸನ, ಎಸ್.ಗೋಪಾಲಕೃಷ್ಣ ಮೂರ್ಜೆ ಸುಳ್ಯ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಸಂಜೆ ಕುಣಿತ ಭಜನೆ, ಏಕವ್ಯಕ್ತಿ ಭರತನಾಟ್ಯ, ಸಮೂಹ ಭರತನಾಟ್ಯ, ಕೂಚಿಪುಡಿ ಏಕ ವ್ಯಕ್ತಿ ಹಾಗೂ ವಿವಿಧ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಗುರುದೇವ ಲಲಿತ ಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಪಿ.ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.