ಸುಳ್ಯ: 2024ರ ಮೊದಲ ವರ್ಷದ ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಸಭೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೆ.ವಿ.ಜಿ. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಪ್ರಾಂಶುಪಾಲರು ಡಾ. ವಿ. ಸುರೇಶ, ಅಕಾಡೆಮಿಕ್ ಡೀನ್ ಡಾ. ಪ್ರಜ್ಞಾ ಎಂ.ಆರ್, ಉಪ ಪ್ರಾಂಶುಪಾಲ ಡಾ. ಶ್ರೀಧರ್ ಕೆ ವೇದಿಕೆಯಲ್ಲಿ ಹಾಜರಿದ್ದರು. ಡಾ. ಉಜ್ವಲ್ ಯು.ಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಮ್ಮ ಭಾಷಣದಲ್ಲಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ನೀಡುವ ಅನೇಕ ಅವಕಾಶಗಳು ಹಾಗೂ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲ್ಲಾ ಸಂಪನ್ಮೂಲಗಳ ಮೂಲಕ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಮಾಡುತ್ತಿರುವ ಶ್ರಮವನ್ನು ವಿವರಿಸಿದರು. ಡಾ. ಪ್ರಜ್ಞಾ ಎಂ.ಆರ್. ಅಕಾಡೆಮಿಕ್ ಡೀನ್, ಕೋರ್ಸ್ ಶ್ರೇಯಾಂಕ, ವಿಷಯಗಳ ಕ್ರೆಡಿಟ್ ವ್ಯವಸ್ಥೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರಿಸಿದರು.
ಪ್ರಶಾಂತ್ (ತರಬೇತಿ ಮತ್ತು ಉದ್ಯೋಗಾಧಿಕಾರಿ) ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ಉದ್ಯೋಗ ಮೇಳಗಳು ಮತ್ತು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ಚಂದ್ರಶೇಖರ್ IIC ನಿರ್ದೇಶಕರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಟಾರ್ಟ್-ಅಪ್ ಮತ್ತು ಕ್ಲಬ್ ಚಟುವಟಿಕೆಗಳಲ್ಲಿ ಭಾಗವಹಿಸಲು ಇರುವ ಅವಕಾಶಗಳ ಬಗ್ಗೆ ತಿಳಿಸಿದರು. ಡಾ. ಭಾಗ್ಯಾ ಎಚ್.ಕೆ. (ಹಾಸ್ಟೆಲ್ ಡೀನ್): ಹಾಸ್ಟೆಲ್ ಸೌಲಭ್ಯಗಳು ಮತ್ತು ವಿದ್ಯಾರ್ಥಿಗಳಿಗೆ ಓದಲು ಇರುವ ವ್ಯವಸ್ಥೆಗಳ ಕುರಿತು ವಿವರಿಸಿದರು. ಪ್ರಾಂಶುಪಾಲರಾದ ಡಾ. ಸುರೇಶ ವಿ. ಅವರು ಸಮಾರೋಪ ಭಾಷಣದಲ್ಲಿ ಕಾರ್ಯಕ್ರಮದ ಮಹತ್ವವನ್ನು ಹಾಗೂ ಪೋಷಕರ ನಿರೀಕ್ಷೆಗಳಿಗೆ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜ್ ಹೇಗೆ ಸ್ಪಂದಿಸುತ್ತಿದೆ ಎಂಬುದನ್ನು ವಿವರಿಸಿದರು.
ಬಳಿಕ ಪೋಷಕರ ಮತ್ತು ಮಾರ್ಗದರ್ಶಕರ ಸಂವಾದ ಕಾರ್ಯಕ್ರಮ ನಡೆಯಿತು, ಇದರಲ್ಲಿ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಅಭಿವೃದ್ದಿ ಕುರಿತು ಚರ್ಚೆ ನಡೆಯಿತು. ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗ ಮುಖ್ಯಸ್ಥರು, ಡೀನ್ ಗಳು, ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ ಸ್ವಾಗತಿಸಿ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ. ಸುರೇಖ ಎಂ ವಂದಿಸಿದರು. ಕಾರ್ಯಕ್ರಮವನ್ನು ಪ್ರೊ. ಭವ್ಯಾ ಪಿ. ಎಸ್. ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸಾಧ್ಯವಾದ ಪೋಷಕರಿಗೆ ನೇರ ಪ್ರಸಾರದ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.