ಸುಳ್ಯ:ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ಅ.8ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ
ಪದಾಧಿಕಾರಿಗಳು ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಅಶೋಕ್ ಪೀಚೆ ಮಾತನಾಡಿ’ನಮ್ಮ ಭೂಮಿ-ನಮ್ಮ ಹಕ್ಕನ್ನು ಉಳಿಸಿಕೊಳ್ಳಲು, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಆಗದಂತೆ ತಡೆಯಲು ಹೋರಾಟ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.ಪ್ರತಿಭಟನಾ ಸಭೆಯಲ್ಲಿ ಪ್ರಮುಖರು ಮಾತನಾಡಲಿದ್ದಾರೆ. ಬಳಿಕ
ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.ರಾಜ್ಯ ಮತ್ತು ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಕೈಬಿಡಬೇಕು, ಯಾವುದೇ ರೀತಿಯ ಸೂಕ್ಷ್ಮ ವಲಯ ಘೋಷಣೆ ವ್ಯಾಪ್ತಿಯಿಂದ ನಮ್ಮ ಗ್ರಾಮಗಳ ಹೆಸರನ್ನು ಕೈಬಿಡಬೇಕು.ಪಶ್ಚಿಮ ಘಟ್ಟಕ್ಕೂ, ಜನವಸತಿ ಪ್ರದೇಶಕ್ಕೂ ಗಡಿಗುರುತು ಮಾಡಿ ಶೂನ್ಯ ಬಫರ್ ಜೋನ್ ಘೋಷಣೆ ಮಾಡಬೇಕು.ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಆ ಕುಟುಂಬಕ್ಕೆ ಸರಕಾರಿ ಉದ್ಯೋಗ ನೀಡಬೇಕು. ಕೃಷಿ ನಾಶ ಮಾಡುವ ಪ್ರಾಣಿಗಳನ್ನು ಪಶ್ಚಿಮ ಘಟ್ಟದ ಕಾಡಿಗೆ ಬಿಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಅಶೋಕ್ ಪೀಚೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಭುವನೇಂದ್ರದಾಸ್ ಉಬರಡ್ಕ, ಜಯರಾಮ ನಾರ್ಕೋಡು,ಸತೀಶ್ಚಂದ್ರ ಪಟ್ರಕೋಡಿ ಉಪಸ್ತಿತರಿದ್ದರು.







