ಸುಳ್ಯ:ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಡಿ.26ರಿಂದ 28ರ ತನಕ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ಮೈದಾನಕ್ಕೆ ಸಂಪೂರ್ಣ ಬೆಳಕಿನ ವ್ಯವಸ್ಥೆ ಮಾಡುವ ‘ಸುವರ್ಣ ದೀಪ’ ಯೋಜನೆಯ
ಕೊಡುಗೆ ನೀಡಲು ನಿರ್ಧರಿಸಲಾಗಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ತಿಳಿಸಿದ್ದಾರೆ.ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಣಕ್ಕೆ ಭದ್ರ ಅಡಿಪಾಯ ಹಾಕಿ ಸುಳ್ಯದ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ ನೆಹರೂ ಮೆಮೋರಿಯಲ್ ಕಾಲೇಜು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ದಿಕ್ಕು ನೀಡಿದ ವಿದ್ಯಾಸಂಸ್ಥೆ.1976ರಲ್ಲಿ ಸ್ಥಾಪನೆಯಾಗಿ ಅರ್ಧ ಶತಮಾನದ ಈ ಸುದೀರ್ಘ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿ, ಜ್ಞಾನ, ಸಂಸ್ಕಾರ ಮತ್ತು ಸಾಧನೆಯ ಹಾದಿಯನ್ನು ತೋರಿದ ಕಾಲೇಜು. ಬದುಕಿಗೆ ದಿಕ್ಕು ತೋರಿದ. ಕನಸುಗಳಿಗೆ ಬಣ್ಣ ತುಂಬಿದ, ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಕಾಲೇಜಿಗೆ

ನಮ್ಮದೊಂದು ಶಾಶ್ವತ ಕೊಡುಗೆ ನೀಡುವ ಸುವರ್ಣಾವಕಾಶವೂ ಹೌದು. ಸಂಸ್ಥೆ ಸುವರ್ಣ ಸಂಭ್ರಮದಲ್ಲಿರುವುದರಿಂದ ನಾವು ಕಲಿತ ಕಾಲೇಜಿಗೆ ನಮ್ಮದೊಂದು ಶಾಶ್ವತ ಕೊಡುಗೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಸಮಿತಿ ಸಭೆಯನ್ನು ನಡೆಸಿ ಚರ್ಚಿಸಲಾಗಿದೆ.ಎಲ್ಲರ ಅಭಿಪ್ರಾಯದಂತೆ ಕಾಲೇಜಿನ ಎದುರಿನ ಮೈದಾನಕ್ಕೆ ಸಂಪೂರ್ಣ ಬೆಳಕಿನ ವ್ಯವಸ್ಥೆಯನ್ನು ಹಿರಿಯ ವಿದ್ಯಾರ್ಥಿಗಳೆಲ್ಲರೂ ಸೇರಿ ಮಾಡುವುದಾಗಿ ನಿರ್ಧರಿಸಿದ್ದೇವೆ. ಇದರಿಂದಾಗಿ ಕಾಲೇಜಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ. ಸುಮಾರು 40 ಲಕ್ಷ ವೆಚ್ಚದಲ್ಲಿ ಈ ಯೋಜನೆ ನಡೆಯಲಿದೆ. ಈ ಮಹತ್ವದ ಯೋಜನೆಗೆ ಗರಿಷ್ಟ ಧನ ಸಹಾಯವನ್ನು ಹಿರಿಯ ವಿದ್ಯಾರ್ಥಿಗಳು,ಹಿತೈಷಿಗಳು ನೀಡುವ ಮೂಲಕ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.ಕಾಲೇಜಿನ

ಸುವರ್ಣ ಮಹೋತ್ಸವ ಡಿ.26ರಿಂದ 28ರ ತನಕ ನಡೆಯಲಿದೆ. ಡಿ.27ರಂದು ಅ.3ರಿಂದ ಹಿರಿಯ ವಿದ್ಯಾರ್ಥಿಗಳ ಸುವರ್ಣ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಕಾಲೇಜಿನಲ್ಲಿ ಕಲಿತ ನೆನಪಿನ ಮೆಲುಕು,ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಆ ಸಂದರ್ಭದಲ್ಲಿ ಸುವರ್ಣ ದೀಪ ಯೋಜನೆಯ ಗುದ್ದಲಿಪೂಜೆ ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಧುರ ಎಂ.ಆರ್, ಮಾಜಿ ಅಧ್ಯಕ್ಷರಾದ ಎಸ್.ಎನ್. ಮನ್ಮಥ, ಚಂದ್ರ ಕೋಲ್ಚಾರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಂ.ರುದ್ರಕುಮಾರ್, ಹಿರಿಯ ವಿದ್ಯಾರ್ಥಿಗಳಾದ ಎನ್.ಜಯಪ್ರಕಾಶ್ ರೈ, ಸುಧಾಕರ ರೈ ಪಿ.ಬಿ., ಚಂದ್ರಶೇಖರ ಪೇರಾಲು, ದೊಡ್ಡಣ್ಣ ಬರೆಮೇಲು, ಎಸ್.ಸಂಶುದ್ದೀನ್,ಎ.ಟಿ.ಕುಸುಮಾಧರ, ರತ್ನಾವತಿ ಕೇರ್ಪಳ, ಕುಲದೀಪ್ ಪೆಲ್ತಡ್ಕ, ,ರಜತ್ ಅಡ್ಕಾರ್, ವಿನುತಾ ಪಾತಿಕಲ್ಲು, ಚಂದ್ರಾವತಿ ಬಡ್ಡಡ್ಕ, ಪ್ರವೀಣ್ ಕುಂಟಿಯಾನ, ಜೋತ್ಸ್ನಾ ಸೇರ್ಕಜೆ, ರಮ್ಯ, ಅಕ್ಷತಾ, ಸನ್ಮಿತ, ಲಾವಣ್ಯ ಮೊದಲಾದವರಿದ್ದರು.ಸುವರ್ಣ ದೀಪ ಯೋಜನೆಯ ಮನವಿ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
















