ಸುಳ್ಯ:ಆಧುನಿಕ ಸುಳ್ಯದ ನಿರ್ಮಾತೃ ಡಾ.ಕುರುಂಜಿ ವೆಂಕಟ್ರಮಣ ಗೌಡರ
98ನೇ ಜಯಂತ್ಯುತ್ಸವದ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನ.29ರಂದು ಅಡ್ಕಾರು ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ ಎಂದು ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಸಂಶುದ್ದೀನ್ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ, ಅಡ್ಕಾರು ವಿನೋಬ ನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಸುಳ್ಯ ಕೆ.ವಿ.ಜಿ. ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವರ ಸಹಭಾಗಿತ್ವದೊಂದಿಗೆ
ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ಕುರುಂಜಿಯವರ ಹುಟ್ಟು ಹಬ್ಬದ ಪ್ರಯುಕ್ತ ನಡೆಯುವ ಕೆವಿಜಿ ಸುಳ್ಯ ಹಬ್ಬದ ಅಂಗವಾಗಿ ಪ್ರತಿ ವರ್ಷ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗುತ್ತದೆ. ಈ ಬಾರಿಯ ಶಿಬಿರದಲ್ಲಿ
ನೂರಕ್ಕೂ ಹೆಚ್ಚು ತಜ್ಞ ವೈದ್ಯರು ಭಾಗವಹಿಸಿ ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ. ಒಂದು ಸಾವಿರಕ್ಕೂ ಅಧಿಕ ಮಂದಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ.ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರಿಂದ ಶೀತ,ಜ್ವರ,ಕೆಮ್ಮು, ರಕ್ತದೊತ್ತಡ, ಸಕ್ಕರೆ ಕಾಯಿಲೆ,ರಕ್ತಹೀನತೆ, ಉಸಿರಾಟದ ತೊಂದರೆ ಇತ್ಯಾದಿ, ಹರ್ನಿಯ, ಅಪೆಂಡಿಕ್ಸ್, ಪಿತ್ತಕೋಶದ ತೊಂದರೆ, ಮೂಲವ್ಯಾಧಿ,ಕಿಡ್ನಿ ಸ್ಟೋನ್, ಮಕ್ಕಳ ಅಪೌಷ್ಟಿಕತೆ, ಗಂಟಲು ಕಿವಿ ಮೂಗುಗಳಿಗೆ ಸಂಬಂಧಿಸಿದ ಚಿಕಿತ್ಸೆ, ಕಣ್ಣಿನ ಪೊರೆ, ದೃಷ್ಟಿ ಸಂಬಂಧಿತ ಇತರ ಕಾಯಿಲೆಗಳು, ಚರ್ಮರೋಗ,ಕಜ್ಜಿ, ತುರಿಕೆ, ಅಲರ್ಜಿ, ಲೈಂಗಿಕ ಚಿಕಿತ್ಸೆ, ಸ್ತ್ರೀ ರೋಗಕ್ಕೆ ಸಂಬಂಧಿಸಿದ ಕಾಯಿಲೆಗಳು ಗರ್ಭಿಣಿ ಚಿಕಿತ್ಸೆ, ಮುಟ್ಟಿನ ಸಂಬಂಧಿತ ತೊಂದರೆ, ಬಂಜೆತನ, ಎಲುಬು ಮತ್ತು ಕೀಲು ಸಂಬಂಧಿತ ಕಾಯಿಲೆಗಳು, ಶ್ವಾಸಕೋಶಕ್ಕೆ ಸಂಬಂಧಿತ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು.ಕೆವಿಜಿ ಆಯುರ್ವೇದ

ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರುಗಳು ತಲೆನೋವು, ಶೀತ, ಜ್ವರ, ಚರ್ಮವ್ಯಾಧಿ, ನಿದ್ರಾಹೀನತೆ, ಸೊಂಟ ನೋವು, ಬೆನ್ನು ನೋವು, ಕತ್ತು ನೋವು, ಗಂಟು ನೋವು, ಸಂಧಿವಾತ, ಆಮವಾತ, ಪಕ್ಷವಾತ, ಹೊಟ್ಟೆ ನೋವು, ತಲೆ, ಕಿವಿ-ಕಣ್ಣು-ಮೂಗಿನ ಸಮಸ್ಯೆಗಳು, ಮೊಡವೆ, ಸಂತಾನ ಹೀನತೆ, ಸ್ತ್ರೀರೋಗ, ಲೈಂಗಿಕ ಸಮಸ್ಯೆಗಳು, ಮಾನಸಿಕ ಖಿನ್ನತೆ, ಬಾಲರೋಗ, ಮೂಲವ್ಯಾಧಿ, ಭಗಂಧರ, ಆಣಿ, ಕೆಡು, ಪಿಸ್ತುಲ, ದೀರ್ಘಕಾಲದ ಹುಣ್ಣು, ಮೂಳೆಸವೆತ, ಕೂದಲು ಉದುರುವಿಕೆ, ತಲೆ ಹೊಟ್ಟು, ಮೂತ್ರಕೋಶದಲ್ಲಿ ಕಲ್ಲು, ಮೂಳೆ ಮುರಿತ ಇತ್ಯಾದಿ ಸಮಸ್ಯೆಗಳಿಗೆ ಸೂಕ್ತ ಆಯುರ್ವೇದ ಚಿಕಿತ್ಸೆ ನೀಡಲಾಗುವುದು.
ಕೆವಿಜಿ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವೈದ್ಯರುಗಳು ಶಿಬಿರದಲ್ಲಿ ದಂತ ತಪಾಸಣೆ, ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಮತ್ತು ತಜ್ಞ ದಂತ ವೈದ್ಯರಿಂದ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಗೆ ಮುಂದುವರಿಕಾ ಹಳದಿ ಕಾರ್ಡನ್ನು ನೀಡಲಾಗುವುದು.
ಮೇಲ್ಲಾಣಿಸಿದ ಎಲ್ಲಾ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ನೀಡಲಾಗುವುದು. ಊರಿನ ಮತ್ತು ಆಸುಪಾಸಿನ ಗ್ರಾಮಗಳ ಎಲ್ಲಾ ನಾಗರಿಕ ಬಂಧುಗಳು ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಎಸ್.ಸಂಶುದ್ದೀನ್ ವಿನಂತಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಕೆ.ವಿ.ದಾಮೋದರ ಗೌಡ, ಮಾಜಿ ಅಧ್ಯಕ್ಷ ಚಂದ್ರಶೇಖರ ಪೇರಾಲು, ಪ್ರಧಾನ ಕಾರ್ಯದರ್ಶಿ ಪಿ.ಎಂ.ರಂಗನಾಥ್, ಕೋಶಾಧಿಕಾರಿ ಚಂದ್ರಶೇಖರ ನಂಜೆ, ನಿರ್ದೇಶಕ ರಾಜು ಪಂಡಿತ್, ಶಿಬಿರದ ಸಂಚಾಲಕರಾದ ಅಬೂಬಕ್ಕರ್ ಅಡ್ಕಾರ್, ರಜತ್ ಅಡ್ಕಾರ್ ಉಪಸ್ಥಿತರಿದ್ದರು.
















