ಬೆಂಗಳೂರು:ಕಸ್ತೂರಿ ರಂಗನ್ ವರದಿ ಸಂಬಂಧ ಹೊರಡಿಸಲಾಗಿರುವ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪದಿರಲು ತೀರ್ಮಾನಿಸಿದ್ದು,ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು
ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮ ಹಾಗೂ ಭೌತಿಕವಾಗಿ ಸರ್ವೆ ನಂಬರ್ವಾರು ಅಳತೆಯನ್ನು ರಾಜ್ಯ ಸರ್ಕಾರದಿಂದ ಮಾಡಲು ನಿರ್ಣಯಿಸಲಾಗಿದೆ.ಪಶ್ಚಿಮ ಘಟ್ಟ ಮೇಲಿನ ಕಸ್ತೂರಿ ರಂಗನ್ ವರದಿ ಸಂಬಂಧ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನಮಗೆ ಪರಿಸರ ಉಳಿಯಬೇಕು. ಕಾಡಿದ್ದರೆ ನಾಡು, ಕಾಡಿದ್ದರೆ ಮಳೆ. ಹಾಗೆಂದು ರೈತರನ್ನೂ ಉಳಿಸಬೇಕು. ಕಾಡು ಉಳಿಯಬೇಕು. ಗ್ರಾಮಮಟ್ಟದಲ್ಲಿ ಪರಿಶೀಲನೆ ಮಾಡುವಂತೆ ಅಭಿಪ್ರಾಯ ವ್ಯಕ್ತವಾಗಿದೆ. ಅದಕ್ಕೆ ನಮ್ಮ ಒಪ್ಪಿಗೆ ಇದೆ.ಕೃಷಿ ಮತ್ತು ತೋಟಗಾರಿಕೆ ಮೊದಲಿನ ರೀತಿ ನಡೆಯಬೇಕು.ರಸ್ತೆ, ಆಸ್ಪತ್ರೆಗಳು ಇವೆ.ಅವುಗಳ ರಕ್ಷಣೆ ನಮ್ಮದು ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದಾರೆ.ಕೇರಳ ಮಾದರಿ ವೈಜ್ಞಾನಿಕ ಸಮೀಕ್ಷೆ ಮಾಡಬೇಕು. ಗ್ರಾಮ ಮಟ್ಟದಲ್ಲಿ, ಸರ್ವೆ ಸಂಖ್ಯೆವಾರು ಭೌತಿಕ ಸರ್ವೆ ಆಗಬೇಕು ಎಂಬುದು ಎಲ್ಲರ ಅಭಿಪ್ರಾಯ ಇದೆ ಎಂದರು.
ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಕೇವಲ ಅಧಿಸೂಚಿತ ಅರಣ್ಯ ಪ್ರದೇಶಗಳು, ಇತರೆ ಅರಣ್ಯ ಪ್ರದೇಶಗಳು ಮಾತ್ರ ಸೇರಿಸಬೇಕು.ಕೃಷಿ ಭೂಮಿ, ತೋಟಗಾರಿಕೆ,ಪ್ಲಾಂಟೇಶನ್ ಪ್ರದೇಶಗಳು, ಜನವಸತಿ ಮತ್ತು ಸಾರ್ವಜನಿಕ ಚಟುವಟಿಕೆ ಪ್ರದೇಶಗಳನ್ನು ಸೇರಿಸಬಾರದು.ತಜ್ಞ ಸಮಿತಿಯಿಂದ ಭೌತಿಕವಾಗಿ ಅರಣ್ಯಗಡಿ, ಜನವಸತಿ, ಪರಿಸರ ಸೂಕ್ಷ್ಮ ಪ್ರದೇಶಗಳನ್ನು, ಜನವಸತಿ ಕೃಷಿ ಚಟುವಟಿಕೆ ಪ್ರದೇಶಗಳನ್ನು ಸರ್ವೆ ನಂಬರ್ವಾರು ಅಳತೆ ಮಾಡಿ ಪ್ರತ್ಯೇಕವಾಗಿ ಗುರುತಿಸಬೇಕು. ಪರಿಸರ ಸೂಕ್ಷ್ಮ ಪ್ರದೇಶದಿಂದಾಗಿ ರೈತರ ಹಾಗೂ ಕಾರ್ಮಿಕರ ಪರ್ಯಾಯ ಜೀವನೋಪಾಯ ಮತ್ತು ಆರ್ಥಿಕ ನೆರವನ್ನು ನೀಡಲು ಸೂಕ್ತ ಮಾರ್ಗಸೂಚಿ ರೂಪಿಸಲು ನಿರ್ಣಯಿಸಲಾಗಿದೆ.
ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ, ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಜೊತೆಗೆ, ಭೌತಿಕವಾಗಿ ಸರ್ವೆ ನಂಬರ್ವಾರು ಅಳತೆ ರಾಜ್ಯ ಸರ್ಕಾರದಿಂದ ಮಾಡಲು ನಿರ್ಧರಿಸಿದ್ದು, ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಲುವಾಗಿ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಒಂದು ವರ್ಷದ ಕಾಲಾವಕಾಶ ನೀಡುವಂತೆ ಮನವಿ ಮಾಡಲು ನಿರ್ಣಯಿಸಲಾಗಿದೆ. ಈ
ಅವಧಿಯವರೆಗೆ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆಯನ್ನು ಅಂತಿಮಗೊಳಿಸಬಾರದು. ರಾಜ್ಯ ಸರ್ಕಾರ ತನ್ನ ವರದಿಯನ್ನು ಸಲ್ಲಿಸಿದ ನಂತರ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಈ ವಿಷಯದ ಕುರಿತು ವಿವರವಾದ ಚರ್ಚೆ ನಡೆಸಿ, ನಂತರವೇ ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ನಿರ್ಣಯಿಸಲಾಗಿದೆ.
ಎಲ್ಲಾ ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ವಿಧಾನ ಸಭೆಯು ಸರ್ವಾನುಮತದಿಂದ ಕರಡು ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪುವುದಿಲ್ಲ ಹಾಗೂ ನ್ಯೂನತೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ ಎಂದು ಸಿಎಂ ತಿಳಿಸಿದ್ದಾರೆ.






