ಬೆಂಗಳೂರು:ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತಾರಕಕ್ಕೇರಿದ್ದು ಅಂತಿಮ ಹಂತ ತಲುಪಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡುತ್ತಾರಾ..ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರಾ ಎಂಬ ಕುತೂಹಲ ಗರಿಗೆದರಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ
ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದ್ದು, ಸಿಎಂ ಸಿದ್ದರಾಮಯ್ಯ ನಾಳೆ ರಾಜಿನಾಮೆ ನೀಡಲಿದ್ದಾರೆ, ಡಿಸಿಎಂ ಡಿಕೆ ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಕೊಳ್ಳಲಿದ್ದಾರೆ ಎಂಬ ವರದಿಗಳು ಕೇಳಿ ಬರುತಿದೆ. ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು
ನಾಳೆ ಎಲ್ಲವನ್ನು ಮಾತಾಡುತ್ತೇನೆ ಎಂದು ಹೇಳಿದ್ದಾರೆ.ನೆಹರು ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಜವಾಹರಲಾಲ್ ನೆಹರುರವರ ಭಾವಚಿತ್ರಕ್ಕೆ ಸಿದ್ದರಾಮಯ್ಯ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ನಾಯಕತ್ವ ವಿಚಾರವಾಗಿ ಉಂಟಾದ ಗೊಂದಲ ಬಗೆಹರಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಆಹ್ವಾನಿಸಿದ್ದ ಪಕ್ಷದ ಹೈಕಮಾಂಡ್ ಮಂಗಳವಾರ ಇಬ್ಬರೂ ನಾಯಕರ ಜತೆ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಸುದೀರ್ಘ ಸಭೆ ನಡೆಸಿತು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಜತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಭೆಯ ಬಳಿಕ ರಾಹುಲ್ ಗಾಂಧಿ ಇಬ್ಬರೂ ನಾಯಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಉಭಯ ನಾಯಕರಿಗೆ ರಾಹುಲ್ ಗಾಂಧಿ ನಿರ್ದಿಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಎಲ್ಲ ಸಚಿವರೊಂದಿಗೆ ಉಪಾಹಾರ ಕೂಟ ನಡೆಸಲಿದ್ದು, ಬಳಿಕ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ರಾಜ್ಯಸಭಾ ಚುನಾವಣೆಯ ಸಲುವಾಗಿ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲವೂ ಊಹಾಪೋಹ’ ಎಂಬ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಎಲ್ಲ ಸಚಿವರೊಂದಿಗೆ ಉಪಾಹಾರ ಕೂಟ ಆಯೋಜಿಸಿದ್ದು, ಬಳಿಕ ರಾಜಿನಾಮೆ ಸಲ್ಲಿಸುವ ಸಾಧ್ಯತೆ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರೆ ಅವರನ್ನು ರಾಜ್ಯಸಭಾ ಸದಸ್ಯರಾಗಿ ಮಾಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.














