ಸುಳ್ಯ: ನೆನೆಗುದಿಗೆ ಬಿದ್ದಿರುವ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಯೋಜನೆಯನ್ನು ಪುನರುಜ್ಜೀವನಗೊಳಿಸಿ ಅನುಷ್ಠಾನಕ್ಕೆ ಪ್ರಯತ್ನ ನಡೆಸಬೇಕು ಎಂದು ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆ ಅನುಷ್ಠಾನ ಕ್ರಿಯಾ ಸಮಿತಿ ವತಿಯಿಂದ ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಗಿದೆ. ಕ್ರಿಯಾ ಸಮಿತಿಯ
ಕಾರ್ಯದರ್ಶಿ ಹಾಗು ಸುಳ್ಯ ವರ್ತಕರ ಸಂಘದ ಅಧ್ಯಕ್ಷರಾದ ಪಿ.ಬಿ.ಸುಧಾಕರ ರೈ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಂಸದರಿಗೆ ಮನವಿ ಅರ್ಪಿಸಿದರು. ಈ ಯೋಜನೆಯ ಕುರಿತು ತಮ್ಮ ಗಮನದಲ್ಲಿ ಇದೆ. ಇದರ ಸಾಧ್ಯತೆಯ ಬಗ್ಗೆ ರೈಲ್ವೇ ಸಚಿವರಲ್ಲಿ ಚರ್ಚೆ ನಡೆಸುತ್ತೇನೆ ಎಂದು ಸಂಸದರು ತಿಳಿಸಿದ್ದಾರೆ ಎಂದು ಸುಧಾಕರ ರೈ ತಿಳಿಸಿದರು. ಸುಳ್ಯದ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ದಿಂದ ಸಂಪಾಜೆ ವರೆಗೆ ಬರುತ್ತಿರುವ 220/132 ಕೆವಿ ಲೈನನ್ನು ಸುಳ್ಯಕ್ಕೆ ವಿಸ್ತರಿಸಲು ಕ್ರಮ ಕೈಗೊಳ್ಳಲು ಅಗತ್ಯ ನೆರವು ನೀಡಬೇಕು ಎಂದು ಮನವಿ ಸಲ್ಲಿಸಲಾಗಿದೆ.ಪಿ.ಗಣೇಶ್ ಭಟ್, ಮಹೇಶ್ ಕುಮಾರ್ ಮೇನಾಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.