ಬೆಲ್ಫಾಸ್ಟ್: ಟಿ20 ಕ್ರಿಕೆಟ್ ವಿಶ್ವಕಪ್ ಚಾಂಪಿಯನ್
ಭಾರತದ ವಿರುದ್ಧ ಐರ್ಲೆಂಡ್ಗೆ ಐತಿಹಾಸಿಕ ಗೆಲುವು. ಟೀಮ್ ಇಂಡಿಯಾದ ಟಿ20 ತಂಡದ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ ಶ್ರೇಯಸ್ ಅಯ್ಯರ್ ಅವರಿಗೆ ಮೊದಲ ಪಂದ್ಯದಲ್ಲೇ ಆಘಾತ ಎದುರಾಗಿದೆ.ಐರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಜವಾಬ್ದಾರಿಯುತ ಆಟ ಪ್ರದರ್ಶಿಸುವಲ್ಲಿ ವಿಫಲವಾದ ಭಾರತ ತಂಡವು 34 ರನ್ಗಳ ಆಘಾತಕಾರಿ ಸೋಲನ್ನು ಒಪ್ಪಿಕೊಂಡಿದೆ.ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ
ವಿಭಾಗಗಳಲ್ಲೂ ಸಂಘಟಿತ ಪ್ರದರ್ಶನ ನೀಡಲು ವಿಫಲವಾದ ಅಯ್ಯರ್ ಪಡೆ ಕ್ರಿಕೆಟ್ ಶಿಶು ಐರ್ಲೆಂಡ್ ಎದುರು ಮಂಡಿಯೂರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಐರ್ಲೆಂಡ್ ಪರ ನಾಯಕ ಲೋರ್ಕನ್ ಟಕರ್ 36 ಎಸೆತಗಳಲ್ಲಿ 50 ರನ್ ಬಾರಿಸಿದರೆ, ಗರೆಥ್ ಡೆಲಾನಿ ಕೇವಲ 32 ಎಸೆತಗಳಲ್ಲಿ 49 ರನ್ ಸಿಡಿಸಿ ತಂಡದ ಮೊತ್ತ 180ರ ಗಡಿ ದಾಟಲು ನೆರವಾದರು. ಭಾರತದ ಪರ ಹರ್ಷಿತ್ ರಾಣಾ 24 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಕಸಿದುಕೊಂಡರು. ಶಿವಂ ದುಬೆ ಒಂದು ವಿಕೆಟ್ ಕಬಳಿಸಿದರು.
183 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಓಪನರ್ ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ನೀಡಿದರು.ಕೇವಲ 20 ಎಸೆತಗಳನ್ನು ಎದುರಿಸಿದ ಅಭಿಷೇಕ್ 7 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ ಭರ್ಜರಿ 50 ರನ್ ಚಚ್ಚಿ ಔಟಾದರು. ಆದರೆ, ಇವರ ನಿರ್ಗಮನದ ಬೆನ್ನಲ್ಲೇ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ತರಗೆಲೆಗಳಂತೆ ಕುಸಿಯಿತು.
ತಂಡದ ನಾಯಕ ಶ್ರೇಯಸ್ ಅಯ್ಯರ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 5 ರನ್ ಹಾಗೂ ಇಶಾನ್ ಕಿಶನ್ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಆ ಬಳಿಕ ಬಂದ ತಿಲಕ್ ವರ್ಮಾ (19) ಹಾಗೂ ಶಿವಂ ದುಬೆ (25) ಅಲ್ಪಕಾಲ ಹೋರಾಟ ನಡೆಸಿದರೂ ಸಹ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ತಂಡ 18.5 ಓವರ್ಗಳಲ್ಲಿ ಕೇವಲ 148 ರನ್ಗಳಿಗೆ ಸರ್ವಪತನ ಕಂಡು ಭಾರಿ ಸೋಲನ್ನು ಅನುಭವಿಸಿತು.
ಐರ್ಲೆಂಡ್ ಪರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಮ್ಯಾಥ್ಯೂ ಹಂಫ್ರೇಸ್ ಮತ್ತು ಮ್ಯಾಥ್ಯೂ ಹೊಲಾರ್ಡ್ ತಲಾ 3 ವಿಕೆಟ್ ಪಡೆದರು.ಜೈ ಮೂಂದ್ರ 2 ವಿಕೆಟ್ ಪಡೆದರೆ, ಲಿಯಾಮ್ ಮ್ಯಾಕಾರ್ತಿ ಹಾಗೂ ಗರೆಥ್ ಡೆಲಾನಿ ತಲಾ ಒಂದು ವಿಕೆಟ್ಗಳನ್ನು ಪಡೆಯುವ ಮೂಲಕ ಐರ್ಲೆಂಡ್ನ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣರಾದರು.






