ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಅವೃತ್ತಿಯು ಮಾರ್ಚ್ 22ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ತಂಡದ
ತವರು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲೇ ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಹಣಾಹಣಿ ನಡೆಯಲಿವೆ. ಫೈನಲ್ ಹಣಾಹಣಿಯು ಮೇ 25ರಂದು ನಡೆಯಲಿದೆ.2024ರ ಆವೃತ್ತಿಯಲ್ಲಿ ಕಪ್ ಗೆದ್ದುಕೊಟ್ಟಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ತಂಡದಲ್ಲಿ ಉಳಿಸಿಕೊಂಡಿಲ್ಲ. ಪಂಜಾಬ್ ಕಿಂಗ್ ಫ್ರಾಂಚೈಸ್, ಈ ಬಾರಿಯ ಹರಾಜಿನಲ್ಲಿ 26.75 ಕೋಟಿ ನೀಡಿ ಶ್ರೇಯಸ್ ಅವರನ್ನು ಖರೀದಿಸಿದೆ. ಹೀಗಾಗಿ, ಈ ಸಲ ಕೆಕೆಆರ್ ಪಡೆಯನ್ನು ಮುನ್ನಡೆಸುವವರು ಯಾರು ಎಂಬ ಕುತೂಹಲ ಗರಿಗೆದರಿದೆ.
ಆರ್ಸಿಬಿ, ಗುರುವಾರವಷ್ಟೆ ನೂತನ ನಾಯಕನನ್ನು ಘೋಷಿಸಿದೆ. ಬ್ಯಾಟಿಂಗ್ನಲ್ಲಿ ಭರವಸೆ ಮೂಡಿಸಿರುವ ರಜತ್ ಪಾಟೀದಾರ್ಗೆ ‘ಮೊದಲ ಕಪ್’ ಗೆದ್ದುಕೊಡುವ ಹೊಣೆ ವಹಿಸಿದೆ.