ಹೈದರಾಬಾದ್: ನಾಯಕ ಇಶಾನ್ ಕಿಶನ್ (91;44ಎ) ಅವರ ಮಿಂಚಿನ ಬ್ಯಾಟಿಂಗ್ ಬಳಿಕ ಮಧ್ಯಮ ವೇಗಿಗಳಾದ ಪ್ರಫುಲ್ ಹಿಂಗೆ ಮತ್ತು ಸಾಕಿಬ್ ಹುಸೇನ್ ಮಾರಕ ದಾಳಿಯ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್ಗಳ ಸುಲಭ ಗೆಲುವು ದಾಖಲಿಸಿತು. ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ
ರಿಯಾನ್ ಪರಾಗ್ ಪಡೆ ಹಾಲಿ ಆವೃತ್ತಿಯಲ್ಲಿ ಮೊದಲ ಸೋಲು ಅನುಭವಿಸಿತು.ಟಾಸ್ ಗೆದ್ದ ರಾಜಸ್ಥಾನ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಇಶಾನ್ ಮತ್ತು ಹೆನ್ರಿಚ್ ಕ್ಲಾಸೆನ್ (40) ಬ್ಯಾಟಿಂಗ್ ಬಲದಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು 6 ವಿಕೆಟ್ಗೆ 216 ರನ್ಗಳ ಉತ್ತಮ ಮೊತ್ತ ಕಲೆಹಾಕಿತು. ಸವಾಲಿನ ಗುರಿ ಪಡೆದ ರಾಜಸ್ಥಾನ ತಂಡವು ಹೊಸಮುಖಗಳಾದ ಪ್ರಫುಲ್ (4–0–34–4) ಮತ್ತು ಸಾಕಿಬ್ (4–0–24–4) ಅಮೋಘ ದಾಳಿಗೆ ಅಕ್ಷರಶಃ ತತ್ತರಿಸಿತು. ಇದರಿಂದಾಗಿ 19 ಓವರ್ಗಳಲ್ಲಿ 159 ರನ್ ಗಳಿಸಿ ಹೋರಾಟ ಮುಗಿಸಿತು.
ವಿದರ್ಭದ 24 ವರ್ಷ ವಯಸ್ಸಿನ ಪ್ರಫುಲ್ ಮೊದಲ ಓವರ್ನಲ್ಲೇ ಬಲವಾದ ಪೆಟ್ಟು ನೀಡಿದರು. ಮೂವರು ಬ್ಯಾಟರ್ಗಳಿಗೆ ಖಾತೆ ತೆರೆಯಲು ಅವಕಾಶ ನೀಡದೆ ಪೆವಿಲಿಯನ್ ದಾರಿ ತೋರಿಸಿದರು. ಎರಡನೇ ಎಸೆತದಲ್ಲಿ ವೈಭವ್ ಸೂರ್ಯವಂಶಿ (0; 1ಎ), ನಾಲ್ಕನೇ ಎಸೆತದಲ್ಲಿ ವಿಕೆಟ್ ಕೀಪರ್ ಧ್ರುವ ಜುರೇಲ್ (0; 2ಎ), ಕೊನೆಯ ಎಸೆತದಲ್ಲಿ ಲ್ಹುವಾನ್-ಡ್ರೆ ಪ್ರಿಟೋರಿಯಸ್ (0; 2ಎ) ಅವರ ವಿಕೆಟ್ ಉರುಳಿಸಿದರು.ಎರಡನೇ ಓವರ್ನಲ್ಲಿ 22 ವರ್ಷದ ಸಾಕಿಬ್ ಮೋಡಿ ಮಾಡಿದರು. ಉತ್ತಮ ಲಯದಲ್ಲಿದ್ದ ಯಶಸ್ವಿ ಜೈಸ್ವಾಲ್ (1) ಅವರನ್ನು ಔಟ್ ಮಾಡಿದರು. ಮೂರನೇ ಓವರ್ನಲ್ಲಿ ಪ್ರಫುಲ್ ಅವರು ಪರಾಗ್ (4) ಅವರ ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡವನ್ನು ಕಂಗೆಡಿಸಿದರು. ಈ ಹಂತದಲ್ಲಿ ರಾಜಸ್ಥಾನ ತಂಡದ ಮೊತ್ತ 5 ವಿಕೆಟ್ಗೆ 9 ರನ್!.
ದೇಶಿ ಕ್ರಿಕೆಟ್ನಲ್ಲಿ ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿರುವ ಪ್ರಫುಲ್ 10 ಪ್ರಥಮ ದರ್ಜೆ ಮತ್ತು 6 ಲಿಸ್ಟ್ ಎ ಕ್ರಿಕೆಟ್ ಆಡಿದ್ದಾರೆ. ಬಿಹಾರದ ಸಾಹಿಲ್ ಅವರು ಆರು ಪ್ರಥಮ ದರ್ಜೆ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈ ಇಬ್ಬರು ಬೌಲರ್ಗಳನ್ನು ಸನ್ರೈಸರ್ಸ್ ತಂಡವು ತಲಾ 30 ಲಕ್ಷ ಮೂಲಬೆಲೆಗೆ ಖರೀದಿಸಿತ್ತು.
















