ಸುಳ್ಯ:ಮಂಗಳೂರು ವಿಭಾಗಕ್ಕೆ ಮಂಜೂರಾದ ಆನೆ ಕಾರ್ಯಪಡೆ ಕಾರ್ಯಾರಂಭ ಮಾಡಿದೆ.ಸುಳ್ಯ ಸಮೀಪ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಬಾವಿಗೆ ಬಿದ್ದ ಕಾಡಾನೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ಆನೆ ಕಾರ್ಯಪಡೆಯ ಸಿಬ್ಬಂದಿಗಳು ಭಾಗವಹಿಸಿದ್ದಾರೆ.ಇದು ಕಾರ್ಯಪಡೆಯ ಮೊದಲ ಪ್ರಮುಖ ಕಾರ್ಯಾಚರಣೆಯಾಗಿದೆ.ಪಡೆಗೆ ಹೊರ ಗುತ್ತಿಗೆ
ಆಧಾರದಲ್ಲಿ 25 ಮಂದಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಉಪವಲಯ ಅರಣ್ಯಾಧಿಕಾರಿಯ ನೇತೃತ್ವದಲ್ಲಿ ಆನೆ ಕಾರ್ಯಪಡೆ ಕಾರ್ಯಾಚಲಿಸಲಿದೆ.ಸುಳ್ಯ ಹಾಗೂ ಗುಂಡ್ಯ ಎಂಬ ಎರಡು ಘಟಕಗಳಾಗಿ ಆನೆ ಕಾರ್ಯ ಪಡೆ ಕಾರ್ಯಾಚರಿಸಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪ ಅವರು ಮಾಹಿತಿ ನೀಡಿದ್ದಾರೆ. ಸುಳ್ಯದಲ್ಲಿ 13 ಮಂದಿ ಹಾಗೂ ಗುಂಡ್ಯದಲ್ಲಿ 12 ಮಂದಿಯ ತಂಡ ಇರಲಿದೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಆನೆ ಹಾವಳಿ ಇರುವ ಕಡೆಗಳಲ್ಲಿ ಆನೆ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ.
ಕಳೆದ 15-20 ದಿನಗಳಿಂದ ಕಾಡಾನೆಗಳ ಸಂಚಾರ ಪಥವನ್ನು ಟ್ರಾಕ್ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ಮಾಡಿದರೆ ಅವುಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಲಾಗುತಿದೆ. ಇದೀಗ ಸರಕಾರಿ ಆದೇಶದಂತೆ ಆನೆ ಕಾರ್ಯಪಡೆ ರಚನೆ ಮಾಡಲಾಗಿದೆ ಹಂತ ಹಂತವಾಗಿ ಅವರಿಗೆ ತರಬೇತಿ, ಇತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಡಿಸಿಎಫ್ ಅವರು ಮಾಹಿತಿ ನೀಡಿದ್ದಾರೆ.

ಪೆರಾಜೆಯಲ್ಲಿ ಸುಮಾರು 5 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬಾವಿಗೆ ಬಿದ್ದ ಆನೆಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಲನ್,ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪ, ಪ್ರೊಬೇಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂಕೇತ್, ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್.ಬಿ.ಎಂ, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಉಪವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು, ಆನೆ ಕಾರ್ಯಪಡೆ ಸಿಬ್ಬಂದಿಗಳು ಸೇರಿ ನೂರಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಪೊಲೀಸ್, ಅಗ್ನಿಶಾಮಕ ಸಳ, ಪಶು ವೈದ್ಯಕೀಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕಾರ ನೀಡಿದ್ದರು.
ಅನೆ ಕಾರ್ಯಪಡೆಯ ಕೆಲಸ ಕಾರ್ಯಗಳೇನು..?
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ ಆನೆ ಕಾರ್ಯಪಡೆ(ಎಲಿಫೆಂಟ್ ಟಾಸ್ಕ್ಪೋರ್ಸ್) ಮಂಜೂರು ಮಾಡಿ ಸರಕಾರ ಆದೇಶ ಮಾಡಿದ್ದು ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಇವುಗಳನ್ನು ಹಿಮ್ಮೆಟ್ಟಿಸಲು ಕಾರ್ಯಪಡೆ ಕಾರ್ಯಾಚರಿಸಲಿದೆ. ಕಾರ್ಯಪಡೆಯಲ್ಲಿ ಒಟ್ಟು 28 ಮಂದಿ ಇರಲಿದ್ದು ಒಬ್ಬರು

ಉಪವಲಯ ಅರಣ್ಯಾಧಿಕಾರಿ, 2 ಗಸ್ತು ಅರಣ್ಯ ಪಾಲಕರು, ಹೊರಗುತ್ತಿಗೆ ಆಧಾರದಲ್ಲಿ 25 ಸಿಬ್ಬಂದಿಗಳು ಇರಲಿದ್ದಾರೆ.
ಸುಳ್ ಈ ಆನೆ ಕಾರ್ಯಪಡೆಯ ಕೇಂದ್ರ ಸ್ಥಾನವಾಗಿದೆ. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನವಸತಿ ಪ್ರದೇಶಗಳಲ್ಲಿ ಕೃಷಿ ಪ್ರದೇಶಗಳಲ್ಲಿ, ಆನೆಗಳ ಚಲನವಲನಗಳನ್ನು ಗುರುತಿಸಿ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸುವುದು.ಕಾಡಾನೆ ಹಾವಳಿ ಕಂಡುಬರುವ ಪ್ರದೇಶಗಳ ಹಳ್ಳಿಗಳಲ್ಲಿನ ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದಲ್ಲದೇ ಅರಣ್ಯ ಪ್ರದೇಶದ ಒಳಗೆ ಸಂಚರಿಸದಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಪ್ರಚುರ ಪಡಿಸುವುದು. ಆನೆ ಕಾರ್ಯವಡೆ ಕೇಂದ್ರಸ್ಥಾನದಲ್ಲಿ ಕಂಟ್ರೋಲ್ ರೂಂ(ನಿಯಂತ್ರಣ ಕೊಠಡಿ) ಕಾರ್ಯ ನಿರ್ವಹಿಸಲಿದೆ.











