*ಗಣೇಶ್ ಮಾವಂಜಿ.
ನಿಮಗೆಲ್ಲರಿಗೂ ಅರಿಷಡ್ವರ್ಗಗಳು ಎಂದರೇನು ಎಂಬುದು ತಿಳಿದಿರಬಹುದು. ನಮ್ಮೊಳಗೇ ಇರುವ ನಮ್ಮ ದುರ್ಗುಣಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ ಹಾಗೂ ಮತ್ಸರ.., ಇವುಗಳು ಮೇರೆ ಮೀರಿ ಅತಿಯಾದಾಗ ಇವುಗಳಿಗೆ ನಮ್ಮನ್ನು ದಹಿಸುವ ಶಕ್ತಿ ಇರುತ್ತದೆ. ಈ ದುರ್ಗುಣಗಳು ಹೇಗೆ ನಮ್ಮನ್ನು ಹೇಗೆ ಮುಗಿಸುತ್ತವೆ ಎಂಬುದನ್ನು ನಾನು ವಿವರಿಸಲು ಹೋಗುವುದಿಲ್ಲ.ಏಕೆಂದರೆ
ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಖಾಯಿಲೆ ಹಿಡಿದು ಹಾಸಿಗೆಯಲ್ಲಿ ಮಲಗಿ ಎದ್ದೇಳಲಾಗದೆ ಹೊರಳಾಡುವಾಗ ಈ ಮದ, ಮತ್ಸರಗಳು ಎಲ್ಲಿಗೆ ಪಲಾಯನಗೈದಿರುತ್ತವೆ ? ಆ ಸಂದರ್ಭದಲ್ಲಿ ಒಮ್ಮೆ ಈ ವಕ್ಕರಿಸಿಕೊಂಡ ರೋಗದಿಂದ ಮುಕ್ತಿ ಸಿಕ್ಕಿದರೆ ಸಾಕಪ್ಪಾ ಎಂಬ ಆರ್ತನಾದದ ಹೊರತು ಬೇರೇನೂ ಇರುವುದಿಲ್ಲ ಎಂಬುದನ್ನು ತಿಳಿಸುವುದಷ್ಟೇ ನನ್ನ ಉದ್ದೇಶ.
ಮನುಷ್ಯ ಆರೋಗ್ಯವಾಗಿದ್ದಾಗ ಕಂಡದ್ದೆಲ್ಲವೂ ಬೇಕು. ಬೇಕಾದ್ದು ಸಿಕ್ಕಿದಾಗ ಮತ್ತಷ್ಟು ಬೇಕೆಂಬ ಆಸೆ ಹೆಚ್ಚಾಗುತ್ತದೆ. ಮತ್ತಷ್ಟು ಸಿಕ್ಕಿದಾಗ ಇನ್ನೊಂದಿಷ್ಟು ಬೇಕೆಂಬ ಲಾಲಸೆ ಹುಟ್ಟುತ್ತದೆ.

ಹೆಸರು, ಹಣ, ಅಧಿಕಾರ ದೊರೆತಾಗಂತೂ ಕ್ರೋಧ ನೆತ್ತಿಯ ಮೇಲೆಯೇ ನರ್ತನಗೈಯುತ್ತದೆ. ಯಾರು ಏನೆಂದರೂ ಸುಮ್ಮಸುಮ್ಮನೆ ಮನಸ್ಸು ಕೋಪ ತಾಳುತ್ತದೆ. ಅದಕ್ಕೆ ಹತ್ತಿರದವರು, ದೂರದವರು ಎಂಬ ಬೇದಭಾವ ಇರುವುದಿಲ್ಲ. ಕೈ ಹಿಡಿದ ಪತ್ನಿ ಅಕ್ಕರೆಯಿಂದ ಊಟ ಬಡಿಸಿದಾಗಲೂ ಪದಾರ್ಥಕ್ಕೆ ಉಪ್ಪು ಕಡಿಮೆ ಆಯಿತೆಂದು ಅದನ್ನು ಆಕೆಯ ಮುಂದೆಯೇ ಚೆಲ್ಲುವಷ್ಟು ಕೋಪ. ಮನೆಯ ಕೆಲಸದಾಕೆ ಒಂದು ದಿನ ನಿಗದಿತ ಸಮಯಕ್ಕಿಂತ ತುಸು ತಡವಾಗಿ ಬಂದದ್ದಕ್ಕೆ ಆಕೆಯ ಜನ್ಮ ಜಾಲಾಡಿ ಬಿಡುವಷ್ಟು ಬೈದು ಬಿಡುವುದು, ಡ್ರೈವಿಂಗ್ ಮಾಡುತ್ತಿದ್ದಾಗ ರಸ್ತೆ ದಾಟುತ್ತಿದ್ದ ವೃದ್ಧ ದಂಪತಿಯಿಂದಾಗಿ ಸ್ಪೀಡ್ ಕಟ್ ಆಯಿತೆಂದು ಅವರ ಮೇಲೆ ರೇಗಾಟ.., ಪ್ರತಿಯೊಂದು ವಿಷಯಕ್ಕೂ ರಂಪ ರಾಮಾಯಣ.
ಅರಿಷಡ್ವರ್ಗಗಳಲ್ಲಿ ಒಂದಾದ ಮೋಹವೂ ಮಿತಿ ಮೀರುವುದು ಮನುಷ್ಯ ದೈಹಿಕವಾಗಿ ಆರೋಗ್ಯವಾಗಿದ್ದಾಗ. ಕುಡಿತ ಕೆಟ್ಟದ್ದು ಎಂಬ ಅರಿವಿದ್ದರೂ ಮನಸ್ಸು ಮಾತ್ರ ಅದರತ್ತಲೇ ಆಕರ್ಷಕವಾಗಿಬಿಡುತ್ತದೆ. ಪ್ರತೀ ದಿನವೂ ಕುಡಿಯಬೇಕೆಂಬ ಮೋಹ ಅತಿಯಾಗುತ್ತದೆ. ಕುಡಿಕುಡಿದು ಕರುಳು ಕರಟಿ ಇನ್ನು ಕುಡಿದರೆ ನಿನಗೆ ಹೊಗೆ ಗ್ಯಾರಂಟಿ ಎಂದು ಡಾಕ್ಟರ್ ಹೇಳಿದ ಮೇಲಷ್ಟೇ ಕುಡಿತದ ಮೋಹದಿಂದ ವ್ಯಕ್ತಿ ವಿಮುಖನಾಗುತ್ತಾನೆ. ಆದರೆ ಮತ್ತೆ ಆರೋಗ್ಯ ಸುಧಾರಣೆಯಾದಾಗ ಅದೇ ವ್ಯಕ್ತಿ ಪುನಃ ಕುಡಿತದತ್ತ ಮೋಹ ಬೆಳೆಸಿಕೊಳ್ಳುತ್ತಾನೆ.
ಕುಡಿತ ಮಾತ್ರವಲ್ಲ. ಪರ ಸ್ತ್ರೀಯರತ್ತ ಮೋಹಗೊಳ್ಳುವುದು, ಇನ್ನೊಬ್ಬರು ಸಕ್ರಮವಾಗಿ ಗಳಿಸಿದ್ದನ್ನು ತಾನು ಅಕ್ರಮವಾಗಿಯಾದರೂ ಗಳಿಸಲೇ ಬೇಕೆಂದು ಅದರತ್ತ ಮೋಹಿತಗೊಳ್ಳುವುದು…, ಇವೆಲ್ಲ ತುಡಿತಗಳೂ ಚಿಗಿತುಕೊಳ್ಳುವುದು ಮೈಮನಸ್ಸು ಆರೋಗ್ಯವಾಗಿದ್ದಾಗ ಮಾತ್ರ.
ಹಣ, ಅಧಿಕಾರ ಇದ್ದಾಗ ನಾನೇ ದೊಡ್ಡವನು ಎಂಬ ಅಹಂಕಾರ ತಲೆ ಎತ್ತುತ್ತದೆ. ಇದೇ ಹಣ, ಅಧಿಕಾರ ಅತಿಯಾದಾಗ ಅಹಂಕಾರದ ಆಟಾಟೋಪವೂ ಹೆಚ್ಚಾಗುತ್ತದೆ.ಆಗ ಮುಖದ ಮಂದಹಾಸ ಮರೆಯಾಗುತ್ತದೆ. ಹೀಗಾದಾಗ ಆ ವ್ಯಕ್ತಿಯಲ್ಲಿ ತಾಳ್ಮೆ, ಸಂಯಮ, ಪ್ರೀತಿಯ ಮಾತುಗಳನ್ನು ಭೂತಕನ್ನಡಿ ಹಿಡಿದು ಹುಡುಕಿದರೂ ಸಿಗಲಾರದು.

ಮನುಷ್ಯನನ್ನು ಒಳಗೊಳಗೇ ದಹಿಸುವ ಮತ್ತೊಂದು ದುರ್ಗುಣವೆಂದರೆ ಅದು ಮತ್ಸರ. ಪರರ ಏಳ್ಗೆಯನ್ನು ಕಂಡು ಏನೇನೋ ಹೇಳಿ ಕರುಬುವುದು, ಅವರಿಗೆ ಹೀನಾಯವಾಗಿ ಬೈಯುವುದು, ಆ ಮೂಲಕ ವಿಘ್ನ ಸಂತೋಷಿಯಾಗುವುದು.., ಇವೆಲ್ಲವೂ ಮಾತ್ಸರ್ಯ ಹೊಂದಿದ ಮನದ ಕಾರುಬಾರುಗಳು. ಆದರೆ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು ಯಾವುದೆಂದರೆ ಆರೋಗ್ಯ ಕೈಕೊಟ್ಟು ಆಸ್ಪತ್ರೆ ಪಾಲಾಗಿ ಪರೀಕ್ಷಿಸಿದ ವೈದ್ಯರು ‘ಈಗೇನೂ ಹೇಳಲು ಸಾಧ್ಯವಿಲ್ಲ’ ಎಂದಾಗ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರಗಳು ಅದೆಲ್ಲಿಗೆ ಪಲಾಯನಗೈದಿರುತ್ತವೋ ಗೊತ್ತೇ ಆಗುವುದಿಲ್ಲ.!
ಯಾವುದೇ ವ್ಯಕ್ತಿಗೆ ಜೀವನ ಎಂಬುದು ಏನು ಎಂಬುದು ಸಾಕ್ಷಾತ್ಕಾರವಾಗುವುದು ಅನಾರೋಗ್ಯ ಬಾಧಿಸಿದಾಗ ಮಾತ್ರ. ಅದರಲ್ಲೂ ಅಪಘಾತವಾಗಿಯೋ ಅಥವಾ ಇನ್ನೇನಾದರೂ ಆರೋಗ್ಯಕ್ಕೆ ಕುತ್ತುಂಟಾಗಿ ಅಂಗಾಂಗಗಳು ಊನವಾಗಿ ಪರರ ಆರೈಕೆಯಲ್ಲಿ ದಿನ ಕಳೆಯುವಂತಾದರೆ ಆರೋಗ್ಯವಾಗಿದ್ದಾಗ ಆಡಿದ ಅಬ್ಬರದ ಮಾತುಗಳಿಗೆ, ಕೋಪಗೊಂಡು ಮಾಡಿದ ಅಚಾತುರ್ಯಗಳಿಗೆ ನಾಚಿಕೆ ಪಡುವಂತಾಗುತ್ತದೆ. ತಂದೆ-ತಾಯಿಯರು, ಗುರುಹಿರಿಯರು ಹೇಳಿದ ಬುದ್ಧಿ ಮಾತುಗಳನ್ನು ಧಿಕ್ಕರಿಸಿ ಹೋದದ್ದಕ್ಕೆ ಪಶ್ಚಾತ್ತಾಪ ಪಡುವ ಸಮಯ ಅದಾಗುತ್ತದೆ.
‘ನಿಮಗೀಗ ಬಿಪಿ, ಶುಗರ್ ಹೆಚ್ಚಾಗಿದೆ. ಸಿಹಿ ತಿನ್ನುವಂತಿಲ್ಲ. ಉಪ್ಪು ಜಾಸ್ತಿ ಬಳಸುವಂತಿಲ್ಲ’ ಎಂದು ವೈದ್ಯರು ಹೇಳಿದಾಗ ಹಿಂದೆಂದೋ ಚಾ ಕ್ಕೆ ಸಕ್ಕರೆ ಕಡಿಮೆ ಆಯಿತೆಂದು, ಅಡುಗೆಗೆ ಉಪ್ಪು ಕಡಿಮೆ ಆಯಿತೆಂದು ಕೈಹಿಡಿದ ಪತ್ನಿಯ ಮುಖಕ್ಕೆ ಬಿಸುಟು ಆಕೆಗೆ ದನಕ್ಕೆ ಬಡಿದ ಹಾಗೆ ಬಡಿದದ್ದು ನೆನಪಾಗುತ್ತದೆ.
ಬೈಕ್ ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿ ಅಂಗಾತ ಮಲಗಿದಾಗ ‘ನಿಧಾನವಾಗಿ ಹೋಗು’ ಎಂದು ಅಜ್ಜಿ ಹೇಳಿದ ಉಪದೇಶದ ಮಾತುಗಳು ಬೇಡಬೇಡವೆಂದರೂ ಮತ್ತೆ ನೆನಪಾಗುತ್ತವೆ. ನೆರೆಮನೆಯವರು ಬಂದು ಆರೋಗ್ಯ ವಿಚಾರಿಸಿ ಆ್ಯಪಲ್, ಮುಸುಂಬಿಯ ಕಟ್ಟನ್ನು ಕೈಗಿರಿಸಿ ‘ಏನಾದರೂ ಸಹಾಯ ಬೇಕಾದರೆ ಕೇಳಿ.., ಸಂಕೋಚ ಪಡಬೇಡಿ ‘ ಎಂದಾಗ ಹಿಂದೊಮ್ಮೆ ಅದ್ಯಾವುದೋ ವಿಷಯಕ್ಕೆ ಅವರೊಂದಿಗೆ ಜಗಳವಾಡಿ ಮಾತುಬಿಟ್ಟದ್ದು ನೆನಪಾಗಿ ನಾಚಿಕೆಯಾಗುತ್ತದೆ.
‘ಒಮ್ಮೆ ಗುಣವಾದರೆ ಸಾಕಪ್ಪಾ…, ನಿನಗೆ ನೂರೆಂಟು ತೆಂಗಿನಕಾಯಿ ಒಡೆದು ಪೂಜೆ ಮಾಡಿಸುತ್ತೇವೆ’ ಎಂದು ಗದ್ಗದಿತ ಕಂಠದಲ್ಲಿ ದೇವರಿಗೆ ಹರಕೆ ಹೊತ್ತು ಕಣ್ಣೀರಿಳಿಸುತ್ತಿರುವ ಅಪ್ಪ, ಅಮ್ಮನನ್ನು ಕಂಡಾಗ ಅವರ ಮಾತುಗಳಿಗೆ ಕವಡೆ ಕಾಸಿನ ಬೆಲೆ ಕೊಡದೆ ಗೆಳೆಯರೊಂದಿಗೆ ಸದಾ ಬೀದಿ ಸುತ್ತುವ ಕಾಯಕದಲ್ಲಿ ನಿರತನಾಗಿದ್ದಕ್ಕೆ ನಾಚಿಕೆಪಡುವಂತಾಗುತ್ತದೆ.
ಅದಕ್ಕೇ ಹೇಳುವುದು. ಆರೋಗ್ಯವಾಗಿದ್ದಾಗ ನಮ್ಮೊಳಗಿನ ವೈರಿಗಳು ನಮ್ಮನ್ನು ಆವರಿಸಿಕೊಂಡು ಗಹಗಹಿಸಿ ನಗುತ್ತವೆ. ಅವುಗಳನ್ನು ನಿಯಂತ್ರಿಸುವಲ್ಲಿ ನಾವು ವಿಫಲವಾದರೆ ನಮ್ಮ ಗೋರಿಯನ್ನು ನಾವೇ ಕಟ್ಟಿಕೊಂಡಂತೆ. ಆರೋಗ್ಯವಾಗಿದ್ದಾಗ ಮಾಡಿದ ಅನಾಚಾರಗಳು, ಆಡಿದ ಅಸಂಬದ್ಧ ಮಾತುಗಳು, ತೋರಿದ ಅನಾಗರಿಕ ನಡವಳಿಕೆಗಳು ತಪ್ಪೆಂದು ಅರಿವಾಗುವುದು ಅನಾರೋಗ್ಯವಾಗಿ ಹಾಸಿಗೆ ಹಿಡಿದಾಗ ಮಾತ್ರ..!

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)
















