ಬ್ರಿಸ್ಟಲ್: ಇಂಗ್ಲೆಂಡ್ ತಂಡವು ಗುರುವಾರ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಒಂಬತ್ತು ವಿಕೆಟ್ಗಳಿಂದ ಭಾರತವನ್ನು ಮಣಿಸಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 3–0ಯಿಂದ ವಶಮಾಡಿಕೊಂಡಿತು. ಐರ್ಲೆಂಡ್ ಬಳಿಕ ಭಾರತಕ್ಕೆ ಇಂಗ್ಲೆಂಡ್ನಲ್ಲಿಯೂ ಸರಣಿ ನಷ್ಟವಾಯಿತು.ಮೊದಲ ಪಂದ್ಯ ಮಳೆಯಿಂದ ರದ್ದಾದರೆ, ನಂತರದ
ಮೂರೂ ಪಂದ್ಯಗಳಲ್ಲಿ ಆತಿಥೇಯ ತಂಡವು ಹ್ಯಾಟ್ರಿಕ್ ಜಯ ದಾಖಲಿಸಿತು. ಸರಣಿಯ ಕೊನೆಯ ಪಂದ್ಯ ಇದೇ 11ರಂದು ನಡೆಯಲಿದೆ.
ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ (ಔಟಾಗದೇ 80;49ಎ) ಅವರ ಬ್ಯಾಟಿಂಗ್ ನೆರವಿನಿಂದ ತಂಡವು 7 ವಿಕೆಟ್ಗೆ 158 ರನ್ ಗಳಿಸಿತು.
ವೈಭವ್ ಸೂರ್ಯವಂಶಿ (15) ಇಶಾನ್ ಕಿಶನ್ (4) ಮತ್ತು ಅಭಿಷೇಕ್ ಶರ್ಮಾ (16) ಬೇಗನೆ ಡಗೌಟ್ ಸೇರಿಕೊಂಡರು.48 ರನ್ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ಶ್ರೇಯಸ್ ಮತ್ತು ಶಿವಂ ದುಬೆ (22;23ಎ) ಆಸರೆಯಾದರು. ಅವರು ನಾಲ್ಕನೇ ವಿಕೆಟ್ಗೆ 53 ರನ್ ಸೇರಿಸಿದರು. ಶ್ರೇಯಸ್ ಅವರ ಇನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್ ಒಳಗೊಂಡಿತ್ತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 37 ಎಸೆತಗಳು ಬಾಕಿ ಇರುವಂತೆ 1 ವಿಕೆಟ್ಗೆ 159 ರನ್ ಗಳಿಸಿ ಸಂಭ್ರಮಿಸಿತು. ಆರಂಭಿಕ ಆಟಗಾರ ಜೋಸ್ ಬಟ್ಲರ್ (8) ಬೇಗನೆ ಔಟಾದರು. ಆದರೆ, ಸಾಲ್ಟ್ ಮತ್ತು ಬ್ರೂಕ್ ಅವರು ಎರಡನೇ ವಿಕೆಟ್ಗೆ ಮುರಿಯದ 146 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.ಹ್ಯಾರಿ ಬ್ರೂಕ್ (ಔಟಾಗದೇ 79;35ಎ) ಮತ್ತು ಫಿಲ್ ಸಾಲ್ಟ್ (ಔಟಾಗದೇ 59;42ಎ) ರನ್ ಗಳಿಸಿದರು







































