ನ್ಯೂಯಾರ್ಕ್: ಫಿಫಾ ಫುಟ್ಬಾಲ್ ವಿಶ್ವಕಪ್ ಅಂತಿಮ ಹಂತಕ್ಕೆ ಬಂದಿದ್ದು ಕ್ವಾರ್ಟರ್ ಫೈನಲ್ ಕದನಕ್ಕೆ ಕಣ ಸಿದ್ಧಗೊಂಡಿದೆ.
48 ತಂಡಗಳ ಪೈಕಿ 40 ತಂಡಗಳು ಗುಂಪು ಹಂತ ಹಾಗೂ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಅಭಿಯಾನ ಕೊನೆಗೊಳಿಸಿದ್ದು, ಉಳಿದ 8 ತಂಡಗಳ ನಡುವೆ ಕ್ವಾರ್ಟರ್ ಫೈನಲ್ ಹಣಾಹಣಿ ನಡೆಯಲಿದೆಮ ಇಂದು ಮಧ್ಯರಾತ್ರಿಯಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. 5 ಬಾರಿ ಚಾಂಪಿಯನ್
ಬ್ರೆಜಿಲ್, 4 ಬಾರಿ ಚಾಂಪಿಯನ್ ಜರ್ಮನಿ, ಆತಿಥೇಯ ದೇಶಗಳಾದ ಅಮೆರಿಕ, ಮೆಕ್ಸಿಕೊ, ಕೆನಡಾ, ಚೊಚ್ಚಲ ಕ್ವಾರ್ಟರ್ ಫೈನಲ್ ನಿರೀಕ್ಷೆಯಲ್ಲಿದ್ದ ಈಜಿಪ್ಟ್ ಜೊತೆಗೆ ಪರಗ್ವೆ, ಕೊಲಂಬಿಯಾ ತಂಡಗಳು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೋತು ಹೊರಬಿದ್ದಿವೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ, ಮಾಜಿ ಚಾಂಪಿಯನ್ಗಳಾದ ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್, ಚೊಚ್ಚಲ ಟ್ರೋಫಿ ಗೆಲ್ಲಲು ಎದುರು ನೋಡುತ್ತಿರುವ ಬೆಲ್ಜಿಯಂ, ನಾರ್ವೆ, ಮೊರಾಕ್ಕೊ, ಸ್ವಿಜರ್ಲೆಂಡ್ ತಂಡಗಳು ಈಗ ಅಂತಿಮ 8ರ ಕಣದಲ್ಲಿವೆ.
ಕ್ವಾರ್ಟರ್ ಫೈನಲ್ ಪ್ರವೇಶಿಸಿದ ತಂಡಗಳು ಒಂದಕ್ಕಿಂತ ಇನ್ನೊಂದು ಬಲಿಷ್ಠವಾಗಿದ್ದು, ರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ಸತತ 3ನೇ
ಫೈನಲ್ ಮೇಲೆ ಕಣ್ಣಿಟ್ಟಿರುವ ಫ್ರಾನ್ಸ್ಗೆ ಮೊರಾಕ್ಕೊ ಸವಾಲು ಎದುರಾಗಲಿದೆ. 2010ರ ಚಾಂಪಿಯನ್ ಸ್ಪೇನ್ ತಂಡ ಬೆಲ್ಜಿಯಂ ವಿರುದ್ಧ ಸೆಣಸಾಡಲಿದೆ. ಇಂಗ್ಲೆಂಡ್ ಹಾಗೂ ನಾರ್ವೆ ತಂಡಗಳ ನಡುವೆ 3ನೇ ಕ್ವಾರ್ಟರ್ ಫೈನಲ್ ನಡೆಯಲಿದ್ದು, ಮೆಸ್ಸಿ ನೇತೃತ್ವದ ಅರ್ಜೆಂಟೀನಾಗೆ ಸ್ವಿಜರ್ಲೆಂಡ್ ಸವಾಲೊಡ್ಡಲಿದೆ.
ಫ್ರಾನ್ಸ್-ಮೊರಾಕ್ಕೊ ಜು.9 ರಾತ್ರಿ 1.30
ಸ್ಪೇನ್-ಬೆಲ್ಜಿಯಂ ಜು.10 ರಾತ್ರಿ 12.30
ನಾರ್ವೆ-ಇಂಗ್ಲೆಂಡ್ ಜು.11 ರಾತ್ರಿ 12.30
ಅರ್ಜೆಂಟೀನಾ-ಸ್ವಿಜರ್ಲೆಂಡ್ ಜು.12 ಬೆಳಗ್ಗೆ 6.30







