ಅಟ್ಲಾಂಟಾ:ಸಂಘಟಿತ ಆಟದ ಮೂಲಕ ಸೋಲಿನ ದವಡೆಯಿಂದ ಅದ್ಭುತವಾಗಿ ಪುಟಿದೆದ್ದ ಅರ್ಜೆಂಟೀನಾ ವಿಶ್ವಕಪ್ ಫುಟ್ಬಾಲ್ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಈಜಿಪ್ಟ್ ತಂಡವನ್ನು ರೋಚಕವಾಗಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.79ನೇ ನಿಮಿಷದವರೆಗೆ 2 ಗೋಲುಗಳ ಹಿನ್ನಡೆಯಲ್ಲಿದ್ದರೂ, ಕೊನೆಯ 15 ನಿಮಿಷಗಳಲ್ಲಿ
3 ಗೋಲುಗಳನ್ನು ಗಳಿಸಿದ ಅರ್ಜೆಂಟೀನ ತಂಡ 3–2 ರ ರೋಚಕ ಗೆಲುವು ದಾಖಲಿಸಿತು. ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 79ನೇ ನಿಮಿಷದವರೆಗೆ 0–2 ಗೋಲುಗಳ ಹಿನ್ನಡೆಯಲ್ಲಿದ್ದ ಅರ್ಜೆಂಟೀನ, ನಂತರ ಸತತ ಮೂರು ಗೋಲುಗಳನ್ನು ಗಳಿಸಿ ಪಂದ್ಯವನ್ನು ತನ್ನ ಪರ ತಿರುಗಿಸಿಕೊಂಡಿತು.ಪಂದ್ಯದ 15ನೇ ನಿಮಿಷದಲ್ಲಿ ಯಾಸೀರ್ ಇಬ್ರಾಹೀಂ ಗೋಲು ಗಳಿಸಿ ಈಜಿಪ್ಟ್ ತಂಡಕ್ಕೆ 1–0 ಮುನ್ನಡೆ ತಂದುಕೊಟ್ಟರು. ಮೊದಲಾರ್ಧದಲ್ಲಿ ಅರ್ಜೆಂಟೀನದ ನಾಯಕ ಲಿಯೊನೆಲ್ ಮೆಸ್ಸಿಗೆ ದೊರೆತ ಪೆನಾಲ್ಟಿ ಅವಕಾಶ ಕೈತಪ್ಪಿತು.
67ನೇ ನಿಮಿಷದಲ್ಲಿ ಮುಸ್ತಾಫಾ ಝಿಕೊ ಗೋಲು ಗಳಿಸುವ ಮೂಲಕ ಈಜಿಪ್ಟ್ ತಂಡ ತನ್ನ ಮುನ್ನಡೆಯನ್ನು 2–0ಕ್ಕೆ ಹೆಚ್ಚಿಸಿ ಅರ್ಜೆಂಟೀನವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತು.ಆದರೆ 79ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ, 83ನೇ ನಿಮಿಷದಲ್ಲಿ ಲಿಯೊನೆಲ್ ಮೆಸ್ಸಿ ಗೋಲು ದಾಖಲಿಸಿ ಸ್ಕೋರನ್ನು 2–2ರಿಂದ ಸಮಬಲಗೊಳಿಸಿದರು.
ಹೆಚ್ಚುವರಿ ಅವಧಿಯ ಮೂರನೇ ನಿಮಿಷದಲ್ಲಿ (90+3) ಎಂಝೊ ಫೆರ್ನಾಂಡಿಸ್ ಹೆಡರ್ ಮೂಲಕ ನಿರ್ಣಾಯಕ ಗೋಲು ಗಳಿಸಿ ಅರ್ಜೆಂಟೀನಗೆ 3–2 ಗೋಲುಗಳ ರೋಚಕ ಗೆಲುವು ತಂದುಕೊಟ್ಟರು.
ಈ ಜಯದೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿತು.
ಕೊಲಂಬಿಯಾ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ (4-3) ಮಣಿಸಿದ ಸ್ವಿಜರ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗದ ಹಿನ್ನಲೆಯಲ್ಲಿ. ಬಳಿಕ ಎಕ್ಸ್ಟ್ರಾ ಸಮಯ ಮತ್ತು ಪೆನಾಲ್ಟಿ ಶೂಟೌಟ್ನತ್ತ ಪಂದ್ಯ ಸಾಗಿತು. ಕ್ವಾರ್ಟರ್ ಫೈನಲ್ನಲ್ಲಿ ಸ್ವಿಜರ್ಲೆಂಡ್ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.







