ಲಾಸ್ ಏಂಜಲೀಸ್:2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲು ಅಂತರದ ಜಯ ಗಳಿಸಿರುವ ಸ್ಪೇನ್ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಪೋರ್ಚುಗಲ್ನ ತಾರೆ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಕನಸು ಭಗ್ನಗೊಂಡಿತು.ಪಂದ್ಯದ ದ್ವಿತೀಯಾರ್ಧದ
ಇಂಜುರಿ ಟೈಮ್ನಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ಮೈಕೆಲ್ ಮೆರಿನೊ (90+1 ನಿಮಿಷ) ಗೋಲು ಬಾರಿಸುವ ಮೂಲಕ ಸ್ಪೇನ್ಗೆ ಸ್ಮರಣೀಯ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.2010ರ ಚಾಂಪಿಯನ್ ಸ್ಪೇನ್, ಇದೀಗ ಮಗದೊಂದು ಸಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.ಇದು ತಮ್ಮ ವೃತ್ತಿಜೀವನದ ಕೊನೆಯ ವಿಶ್ವಕಪ್ ಎಂದು ರೊನಾಲ್ಡೊ ಈಗಾಗಲೇ ಘೋಷಿಸಿದ್ದಾರೆ.
ಫಿಫಾ ವಿಶ್ವಕಪ್ ಟೂರ್ನಿಯ ಇನ್ನೊಂದು ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಆತಿಥೇಯ ಅಮೆರಿಕ ವಿರುದ್ಧ 4-1 ಗೋಲುಗಳ ಭರ್ಜರಿ ಗೆಲುವು ಗಳಿಸಿರುವ ಬೆಲ್ಜಿಯಂ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ.
ಬೆಲ್ಜಿಯಂ ಪರ ಚಾರ್ಲ್ಸ್ ಡಿ ಕೆಟೆಲೇರೆ ಎರಡು ಗೋಲು ಗಳಿಸಿದರೆ (9 ಹಾಗೂ 33ನೇ ನಿಮಿಷ), ಹ್ಯಾನ್ಸ್ ವಾನಕನ್ (57) ಹಾಗೂ ರೊಮೆಲು ಲುಕಾಕು (90+3) ತಲಾ ಒಂದು ಗಳಿಸಿ ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.ಅಮೆರಿಕದ ಪರ ಮಾಲಿಕ್ ಟಿಲ್ಮ್ಯಾನ್ ಪಂದ್ಯದ 31ನೇ ನಿಮಿಷದಲ್ಲಿ ಗೋಲು ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿದರು.
ಈ ಸೋಲಿನೊಂದಿಗೆ ಟೂರ್ನಿಯ ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕ ವಿಶ್ವಕಪ್ನಿಂದ ಹೊರಬಿದ್ದಿದೆ. ಇದಕ್ಕೂ ಮುನ್ನ ರೌಂಡ್ ಆಫ್ 16 ಹಂತದಲ್ಲಿ ಕೆನಡಾ ಮತ್ತು ಮೆಕ್ಸಿಕೋ ತಂಡಗಳು ಹೊರಬಿದ್ದಿದ್ದವು.







