ಕೊಲಂಬೋ: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಗೆಲುವಿನ ಉತ್ತಮ ಅವಕಾಶ ಹೊಂದಿದ್ದ ಭಾರತಕ್ಕೆ ಕೊನೆಗೂ ನಿರಾಸೆಯಾಗಿದ್ದು, ಲಂಕಾದ ಬಾಲಂಗೋಚಿ ಬ್ಯಾಟರ್ ಗಳ ಹೋರಾಟದಿಂದ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯಗೊಂಡಿದೆ.4ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. 7 ರನ್ ಗಳಿಸಿದ್ದ
ಸೋನಲ್ ದಿನುಶಾ ಮತ್ತು 3 ರನ್ ಗಳಿಸಿದ್ದ ಕೆಶಾರಾ ನುವಾಂತ ಅಂತಿಮ ದಿನದಾಟ ಮುಂದುವರೆಸಿದರು. ಗುರುವಾರ ಐದನೇ ದಿನದಾಟ ಆರಂಭಿಸಿದಾಗ ಭಾರತ ಗೆಲುವಿನ ಭರವಸೆಯಲ್ಲಿತ್ತು.ನಾಲ್ಕನೇ ದಿನದ ಅಂತ್ಯಕ್ಕೆ ಫಾಲೋಆನ್ ಪಡೆದಿದ್ದ ಶ್ರೀಲಂಕಾ 229/6 ರನ್ ಗಳಿಸಿ ಕೇವಲ 16 ರನ್ಗಳ ಮುನ್ನಡೆಯಲ್ಲಿತ್ತು. ಹೀಗಾಗಿ ಭಾರತದ ಬೌಲರ್ಗಳು ಉಳಿದ ನಾಲ್ಕು ವಿಕೆಟ್ಗಳನ್ನು ಶೀಘ್ರವಾಗಿ ಕಬಳಿಸಿ ಪಂದ್ಯ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು.
ಆದರೆ ಲಂಕಾದ ಬಾಲಂಗೋಚಿ ಬ್ಯಾಟರ್ ಸೋನಲ್ ದಿನುಷಾ ಭಾರತದ ಗೆಲುವಿನ ಹಾದಿಗೆ ದೊಡ್ಡ ಅಡ್ಡಿಯಾದರು. ಅಂತಿಮ ದಿನ ರಕ್ಷಣಾತ್ಮಕ ಆಟವಾಡಿದ ದಿನುಷಾ 264 ಎಸೆತಗಳನ್ನು ಎದುರಿಸಿ 8 ಬೌಂಡರಿ, 2 ಸಿಕ್ಸರ್ ಗಳ ಸಹಿತ ಅಜೇಯ 133 ರನ್ ಕಲೆಹಾಕಿದರು.ಅವರ ಹೋರಾಟದ ನೆರವಿನಿಂದ ಶ್ರೀಲಂಕಾ ಎರಡನೇ ಇನಿಂಗ್ಸ್ನಲ್ಲಿ 429/9 ರನ್ ಗಳಿಸಿತು. ದಿನುಷಾ ಅವರಿಗೆ ನುವಾಂತ ಉತ್ತಮ ಸಾಥ್ ನೀಡಿದರು. ನುವಾಂತ ಕೂಡ 150 ಎಸೆತಗಳನ್ನು ಎದುರಿಸಿ 46 ರನ್ ಗಳಿಸಿ ಕೇವಲ 4 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು. ಏಳನೇ ವಿಕೆಟ್ಗೆ ಇವರಿಬ್ಬರು 112 ರನ್ಗಳ ಜೊತೆಯಾಟ ನೀಡಿದರು. ಕೊನೆಗೆ ಎರಡೂ ತಂಡಗಳು ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲು ಒಪ್ಪಿಕೊಂಡವು. ಫಾಲೋಆನ್ ಹೇರಿಯೂ ಭಾರತ ಗೆಲ್ಲಬಹುದಾಗಿದ್ದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
ಶ್ರೀಲಂಕಾ ಸರಣಿ ಮುಗಿದ ಬಳಿಕ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇನ್ನೂ 7 ಟೆಸ್ಟ್ಗಳು ಬಾಕಿ ಇವೆ. ನ್ಯೂಜಿಲೆಂಡ್ ವಿರುದ್ಧ 2 ಹಾಗೂ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ಗಳನ್ನು ಭಾರತ ಆಡಲಿದೆ. ಫೈನಲ್ ರೇಸ್ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳಬೇಕಾದರೆ ಈ ಏಳು ಪಂದ್ಯಗಳಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಗೆಲ್ಲಬೇಕಾದ ಅಗತ್ಯವಿದೆ. ಜೊತೆಗೆ ಇತರ ತಂಡಗಳ ಫಲಿತಾಂಶಗಳೂ ಭಾರತದ ಪರವಾಗಿ ಬರಬೇಕಾಗುತ್ತದೆ.









