ಮುಕ್ಕೂರು:ಎಂಟು ಶತಮಾನಗಳ ಐತಿಹ್ಯ ಹೊಂದಿರುವ ಮೇಲಿನ ಮುಕ್ಕೂರು ತರವಾಡಿನ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ಹಾಗೂ ಶ್ರೀ ಗುಳಿಗ ದೈವಸಾನಿಧ್ಯಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಸೆ.20ರಂದು ಅನುಜ್ಞಾ ಕಲಶ ಹಾಗೂ 2027ರ ಜ.9 ಮತ್ತು 10ರಂದು ನಡೆಯಲಿರುವ ಪ್ರತಿಷ್ಠಾ ಕಾರ್ಯ ಮತ್ತು ನೇಮಕ್ಕೆ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕ್ಷೇತ್ರದ ಇತಿಹಾಸ ಮತ್ತು ಐತಿಹ್ಯ ಒಳಗೊಂಡ ಮಾಹಿತಿ ಪತ್ರ ಹಾಗೂ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ಮೇಲಿನ ಮುಕ್ಕೂರು ತರವಾಡಿನ ಕುಟುಂಬದ ಹಿರಿಯರಾದ ಎಂ.ಕೆ. ಬಾಲಚಂದ್ರರಾವ್ ಹಾಗೂ ಲಕ್ಷ್ಮೀಶ ಬೈಪಾಡಿತ್ತಾಯ ಅವರ ನೇತೃತ್ವದಲ್ಲಿ ಮಾಹಿತಿ ಪತ್ರ ಹಾಗೂ ಅನುಜ್ಞಾ ಕಲಶದ ಆಮಂತ್ರಣ ಪತ್ರಿಕೆಯನ್ನು ನಳಿನ್ ಕುಮಾರ್ ಕಟೀಲ್ ಅವರಿಗೆ ಹಸ್ತಾಂತರಿಸಲಾಯಿತು.
ಅಷ್ಟಮಂಗಲ ಪ್ರಶ್ನಾಚಿಂತನೆಯ ಪ್ರಕಾರ ಮೇಲಿನ ಮುಕ್ಕೂರಿನ ಉತ್ತರ–ವಾಯುವ್ಯ ಭಾಗದಲ್ಲಿ ಪೂರ್ವಾಭಿಮುಖವಾಗಿ ದೈವದ ಚಾವಡಿ ನಿರ್ಮಿಸಿ, ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ಹಾಗೂ ಶ್ರೀ ಗುಳಿಗ ದೈವಗಳ ಉಪಾಧಿಗಳನ್ನು ಪೀಠದಲ್ಲಿ ಇರಿಸಿ ಆರಾಧಿಸಬೇಕೆಂದು ತಿಳಿದುಬಂದಿದೆ. ದೈವಗಳಿಗೆ ಉತ್ಸವದ ಜತೆಗೆ ಪ್ರತಿವರ್ಷ ಪಂಚಪರ್ವ, ನಿತ್ಯದೀಪ, 12 ಸಂಕ್ರಮಣ, ದೀಪಾವಳಿ, ಯುಗಾದಿ, ಪತ್ತನಾಜೆ, ಚೌತಿ ಹಾಗೂ ನವರಾತ್ರಿಯ ಪರ್ವಗಳನ್ನು ಆಚರಿಸುವಂತೆ ಪ್ರಶ್ನಾಚಿಂತನೆಯಲ್ಲಿ ಕಂಡುವಬಂದಿರುವ ವಿಚಾರವನ್ನು ನಳಿನ್ ಕುಮಾರ್ ಕಟೀಲ್ ಅವರಿಗೆ ವಿವರಿಸಲಾಯಿತು.
ಮೇಲಿನ ಮುಕ್ಕೂರು ದೈವಗಳ ಭಂಡಾರದ ಮನೆಯಾಗಿ ಹಿಂದಿನಿಂದಲೂ ಮಹತ್ವ ಪಡೆದಿದೆ. ಅನಾದಿ ಕಾಲದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೆಯಂದು ಇಲ್ಲಿಂದ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು ಹಾಗೂ ಶ್ರೀ ಗುಳಿಗ ದೈವಗಳ ಭಂಡಾರ ಪೆರುವೋಡಿ ದೇವಾಲಯಕ್ಕೆ ತೆರಳುತ್ತಿತ್ತು. ಅಲ್ಲಿ ದೈವ–ದೇವರ ಭೇಟಿ ನಡೆದು, ಬಳಿಕ ದೈವಗಳಿಗೆ ನೇಮ ನಡೆದು ಮರುದಿನ ಭಂಡಾರವನ್ನು ಮೇಲಿನ ಮುಕ್ಕೂರಿಗೆ ತರುವ ಪದ್ಧತಿ ಇತ್ತು. ಕಾಲಕ್ರಮೇಣ ಈ ಆಚರಣೆ ಸ್ಥಗಿತಗೊಂಡಿರುವ ಅಂಶ ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದ್ದು, ದೈವಗಳ ಮೊಗ ಹಾಗೂ ಇತರ ಪರಿಕರಗಳು ಈಗಲೂ ಕ್ಷೇತ್ರದಲ್ಲಿದ್ದು, ಇಲ್ಲಿನ ಪ್ರಾಚೀನ ಐತಿಹ್ಯಕ್ಕೆ ಸಾಕ್ಷಿಯಾಗಿರುವುದನ್ನು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಮೇಲಿನ ಮುಕ್ಕೂರು ತರವಾಡಿನ ಸುಧೀರ್ ಕೊಂಡೆಪ್ಪಾಡಿ, ಮುರಳಿ ಕೃಷ್ಣ ಬೈಪಾಡಿತ್ತಾಯ, ಪ್ರಗತಿಪರ ಕೃಷಿಕರಾದ ಸಂಜೀವ ಗೌಡ ಬೈಲಂಗಡಿ, ಗುಡ್ಡಪ್ಪ ಗೌಡ ಅಡ್ಯತಕಂಡ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ನೇಸರ ಯುವಕ ಮಂಡಲದ ಸದಸ್ಯ ಜಯಂತ ಗೌಡ ಕುಂಡಡ್ಕ,ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕಂರ್ಬುತ್ತೋಡಿ ಹಾಗೂ ಶ್ರೀ ಉಳ್ಳಾಲ್ತಿ ಭಕ್ತವೃಂದದ ಸದಸ್ಯ ಭಾಸ್ಕರ ಕುಂಡಡ್ಕ ಉಪಸ್ಥಿತರಿದ್ದರು.









