ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಣ ಮೊದಲ ಏಕದಿನ ಪಂದ್ಯ ರೋಚಕ ‘ಟೈ’ನಲ್ಲಿ ಅಂತ್ಯ ಕಂಡಿತು.ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಎಂಟು ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ ಭಾರತ 47.5 ಓವರ್ಗಳಲ್ಲಿ 230ಕ್ಕೆ ಆಲೌಟ್ ಆಯಿತು. ಭಾರತದ ಪರ ನಾಯಕ ರೋಹಿತ್ ಶರ್ಮಾ ಅರ್ಧಶತಕ (58) ಗಳಿಸಿದರು. ಶಿವಂ ದುಬೆ(25 ರನ್, 24 ಎಸೆತ)ಕ್ರೀಸ್ನಲ್ಲಿ ಇರುವ ತನಕ ಭಾರತ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ
ನಾಯಕ ಚರಿತ್ ಅಸಲಂಕಾ ಎಸೆದ 48ನೇ ಓವರ್ನ ಸತತ ಎಸೆತಗಳಲ್ಲಿ ದುಬೆ ಹಾಗೂ ಅರ್ಷದೀಪ್ ಸಿಂಗ್ ವಿಕೆಟ್ ಒಪ್ಪಿಸಿದ ಪರಿಣಾಮ ಭಾರತ ಪಂದ್ಯ ಗೆಲ್ಲುವಲ್ಲಿ ವಿಫಲವಾಯಿತು.ಇನಿಂಗ್ಸ್ ಆರಂಭಿಸಿದ ರೋಹಿತ್ ಹಾಗೂ ಶುಭಮನ್ ಗಿಲ್(16 ರನ್)ಮೊದಲ ವಿಕೆಟ್ಗೆ 75 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.ಭಾರತದ ಪರ ರೋಹಿತ್ ಸರ್ವಾಧಿಕ ಸ್ಕೋರ್ ಗಳಿಸಿದರೆ, ವಿರಾಟ್ ಕೊಹ್ಲಿ(24 ರನ್), ಶ್ರೇಯಸ್ ಅಯ್ಯರ್(23 ರನ್), ಕೆ.ಎಲ್.ರಾಹುಲ್(31 ರನ್ ) ಹಾಗೂ ಅಕ್ಷರ್ ಪಟೇಲ್(33 ರನ್ )ಎರಡಂಕೆಯ ಸ್ಕೋರ್ ಗಳಿಸಿದರು. ಭಾರತವು 130 ರನ್ಗೆ 4 ವಿಕೆಟ್ ಕಳೆದುಕೊಂಡಾಗ ಜೊತೆಯಾದ ರಾಹುಲ್ ಹಾಗೂ ಅಕ್ಷರ್ 6ನೇ ವಿಕೆಟ್ಗೆ 57 ರನ್ ಸೇರಿಸಿ ತಂಡವನ್ನು ಆಧರಿಸಿದರು.ಲಂಕಾ ಬೌಲಿಂಗ್ ವಿಭಾಗದಲ್ಲಿ ಚರಿತ್ ಅಸಲಂಕಾ(3-30) ಹಾಗೂ ವನಿಂದು ಹಸರಂಗ(3-58)ತಲಾ 3 ವಿಕೆಟ್ಗಳನ್ನು ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ವೆಲ್ಲಲಾಗೆ (2-39)ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು.
ಆರಂಭಿಕ ಬ್ಯಾಟರ್ ಪಥುಮ್ ನಿಸ್ಸಾಂಕ(56 ರನ್, 75 ಎಸೆತ, 9 ಬೌಂಡರಿ)ಅಗ್ರ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನೀಡಿದರು. ಕೆಳ ಕ್ರಮಾಂಕದಲ್ಲಿ ದುನಿತ್ ವೆಲ್ಲಲಾಗೆ(ಔಟಾಗದೆ 67 ರನ್, 65 ಎಸೆತ, 7 ಬೌಂಡರಿ, 2 ಸಿಕ್ಸರ್)ಅರ್ಧಶತಕ ಸಿಡಿಸಿ ಲಂಕಾ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.
ಭಾರತದ ಬೌಲಿಂಗ್ ವಿಭಾಗದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್(2-33), ಅಷರ್ದೀಪ್ ಸಿಂಗ್(2-47) ತಲಾ ಎರಡು ವಿಕೆಟ್ ಪಡೆದರು. ಶಿವಂ ದುಬೆ(1-19), ಮುಹಮ್ಮದ್ ಸಿರಾಜ್(1-36) , ಕುಲದೀಪ್ ಯಾದವ್(1-33)ಹಾಗೂ ವಾಶಿಂಗ್ಟನ್ ಸುಂದರ್(1-46) ತಲಾ ಒಂದು ವಿಕೆಟ್ ಪಡೆದರು.