ಬೆಂಗಳೂರು: ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಆ. 6ರವರೆಗೆ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿರಂತರ ಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಂಭವವಿದೆ. ಬೆಳಗಾವಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ
‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದ್ದು, ಈ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಭಾರಿ ಮಳೆಯೊಂದಿಗೆ ಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳ ಹಾಗೂ ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ಹೇಳಿದೆ.ಕರಾವಳಿ ಉದ್ದಕ್ಕೂ ಗಾಳಿಯಿಂದ ಕೂಡಿದ ಮಳೆಯ ಹವಾಮಾನ ಇರಲಿದೆ. ಗಂಟೆಗೆ 35ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ
ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ 6 ರವರೆಗೂ ಭಾರಿ ಮಳೆ ಮುಂದುವರಿಯಲಿದೆ. ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.