ಎಜ್ಬಾಸ್ಟನ್: ಆ್ಯಂಡರ್ಸನ್– ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಇಂದಿನಿಂದ ಎಜ್ಬಾಸ್ಟನ್ನಲ್ಲಿ ಆರಂಭವಾಗಲಿದೆ. ಲೀಡ್ಸ್ ಟೆಸ್ಟ್ನಲ್ಲಿ ಸೋಲನುಭವಿಸಿ ಹಿನ್ನಡೆಯಲ್ಲಿರುವ ಟೀಂ ಇಂಡಿಯಾಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.ಮತ್ತೊಂದು ಸೋಲು ಭಾರತವನ್ನು ಸರಣಿಯಲ್ಲಿ ಇನ್ನಷ್ಟು ಸಂಕಷ್ಟಕ್ಕೆ ದೂಡಬಹುದು. ಮೊದಲ ಟೆಸ್ಟ್ನಲ್ಲಿ
ಭಾರತ ಉತ್ತಮ ಬ್ಯಾಟಿಂಗ್ ನಡೆಸಿ ಐದು ಶತಕ ದಾಖಲಿಸಿದರೂ ಸೋಲನುಭವಿಸಿತ್ತು. ಬೂಮ್ರಾ ಹೊರತು ಪಡಿಸಿದ ಬೌಲಿಂಗ್ ವಿಭಾಗದ ವೈಫಲ್ಯ, ಕಳಪೆ ಕ್ಷೇತ್ರ ರಕ್ಷಣೆ ಹಾಗೂ ಮಧ್ಯಮ ಹಾಗೂ ಬಾಲಂಗೋಚಿ ಬ್ಯಾಟರ್ಗಳ ಬ್ಯಾಟಿಂಗ್ ವೈಫಲ್ಯದಿಂದ ಸೋಲನುಭವಿಸಬೇಕಾಯಿತು.
ಈ ಬಾರಿ ಹೊಸ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಬೇಕಾಗಿದೆ.
ಈ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ಆಡುವರೇ, ಇಲ್ಲವೇ ಎಂಬುದನ್ನು ತಂಡ ಖಚಿತಪಡಿಸಿಲ್ಲ. ಕಂಡಹಾಗೆ, ಈ ಮುಂಚೂಣಿ ಬೌಲರ್ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದ್ದು, ಆಕಾಶ್ ದೀಪ್ ಅಥವಾ ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ಸಿಗಬಹುದು. ಭಾರತ ಇಬ್ಬರು ಸ್ಪಿನ್ನರ್ಗಳೊಡನೆ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಎರಡನೇ ಸ್ಪಿನ್ನರ್ ಕುಲದೀಪ್ ಯಾದವ್ ಆಗುತ್ತಾರೆಯೇ ಅಥವಾ ಬ್ಯಾಟಿಂಗ್ಗೆ ಬಲ ನೀಡಬಲ್ಲ
ವಾಷಿಂಗ್ಟನ್ ಸುಂದರ್ ಆಗುತ್ತಾರೆಯೇ ಎಂಬುದನ್ನು ಕಾದುನೋಡಬೇಕಾಗಿದೆ.ಇನ್ನೊಂದು ಕಡೆ ಇಂಗ್ಲೆಂಡ್ ತುಂಬು ವಿಶ್ವಾಸದಿಂದ ಇದೆ. ಲೀಡ್ಸ್ನಲ್ಲಿ ಹಿನ್ನಡೆಯಿಂದ ಅದು ಗೆಲುವು ಕಸಿದ ರೀತಿ ಅಮೋಘವಾಗಿತ್ತು. ಯಾವುದೇ ಬದಲಾವಣೆ ಮಾಡದೇ 11ರ ಬಳಗವನ್ನು ಎರಡು ದಿನ ಮೊದಲೇ ಪ್ರಕಟಿಸಿದೆ.
ತಂಡಗಳು
ಭಾರತ: ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪ ನಾಯಕ–ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ಕರುಣ್ ನಾಯರ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್.
ಇಂಗ್ಲೆಂಡ್ (ಅಂತಿಮ 11): ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸ್, ಜೋಶ್ ಟಂಗ್ ಮತ್ತು ಶೋಯೆಬ್ ಬಶೀರ್.