ಸಿಡ್ನಿ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಸಮಾಧಾನಕರ ಜಯ ತಂದಿತು. ಆತಿಥೇಯ ತಂಡವು ಸರಣಿಯನ್ನು 2–1ರಿಂದ ಗೆದ್ದಿತು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 9 ವಿಕೆಟ್ಗಳಿಂದ ಜಯಿಸಿತು. 237 ರನ್ಗಳ ಸಾಧಾರಣ ಗುರಿಯನ್ನು ಭಾರತ ತಂಡವು
ರೋಹಿತ್ ಶರ್ಮಾ (ಅಜೇಯ 121) ಮತ್ತು ವಿರಾಟ್ ಕೊಹ್ಲಿ (ಅಜೇಯ 74) ಅವರ ಮುರಿಯದ ಎರಡನೇ ವಿಕೆಟ್ ಜೊತೆಯಾಟ (168 ರನ್)ದ ನೆರವಿನಿಂದ 38.3 ಓವರ್ಗಳಲ್ಲಿ ಸುಲಭವಾಗಿ ಮುಟ್ಟಿತು.ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಹರ್ಷಿತ್ ರಾಣಾ (39ಕ್ಕೆ4) ಮತ್ತು ವಾಷಿಂಗ್ಟನ್ ಸುಂದರ್ (44ಕ್ಕೆ2) ಅವರ ಅಮೋಘ ಬೌಲಿಂಗ್ ಮುಂದೆ ಆಸ್ಟ್ರೇಲಿಯಾ ತಂಡವು 46.4 ಓವರ್ಗಳಲ್ಲಿ 236 ರನ್ ಗಳಿಸಿತು. ಮ್ಯಾಟ್ ರೆನ್ಷಾ (56; 58ಎಸೆತ) ಅವರ ಅರ್ಧಶತಕ ತಂಡಕ್ಕೆ ಆಸರೆಯಾಯಿತು.
ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಮತ್ತು ನಾಯಕ ಗಿಲ್ ಮೊದಲ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. 11ನೇ ಓವರ್ನಲ್ಲಿ ಗಿಲ್ ಔಟಾದರು.
ಸರಣಿಯ ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ರೋಹಿತ್ ಇಲ್ಲಿ ಆತ್ಮವಿಶ್ವಾಸಭರಿತ ಆಟವಾಡಿದರು. ಇನಿಂಗ್ಸ್ ಕಟ್ಟುವ ಹೊಣೆ ಹೊತ್ತ ಅವರು ಮಿಚೆಲ್ ಸ್ಟಾರ್ಕ್ ಅವರ ಎಸೆತಗಳಲ್ಲಿ ನಿಖರ ಮತ್ತು ನವೀರಾದ ಡ್ರೈವ್ ಹಾಗೂ ಫ್ಲಿಕ್ಗಳನ್ನು ಆಡಿದ ರೋಹಿತ್, ಸ್ಪಿನ್ನರ್ ಆ್ಯಡಂ ಜಂಪಾ ಎಸೆತದಲ್ಲಿ ಸಿಕ್ಸರ್ ಎತ್ತುವ ಮೂಲಕ ಸ್ಪಿನ್ ಬೌಲಿಂಗ್ಗೂ ಸವಾಲೊಡ್ಡಿದರು. ರೋಹಿತ್ ಏಕದಿನ ಕ್ರಿಕೆಟ್ನಲ್ಲಿ 33ನೇ ಶತಕ ದಾಖಲಿಸಿದರು. ರೋಹಿತ್ 63 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರದ 50 ರನ್ಗಳನ್ನು 42 ಎಸೆತಗಳಲ್ಲಿ ಸೇರಿಸಿದರು. ರೋಹಿತ್125 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 121 ರನ್ ಬಾರಿಸಿದರು.
ಕಳೆದೆರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ಕೊಹ್ಲಿ ಇಲ್ಲಿ 81 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 74 ರನಗ ಹೊಡೆದರು.















