ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ನೂತನ ಏಕದಿನ ಕ್ರಿಕೆಟ್ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ.ಪಾಕಿಸ್ತಾನದ ಬಾಬರ್ ಆಜಂ ಅವರನ್ನು ಹಿಂದಿಕ್ಕಿರುವ ಗಿಲ್, ತಮ್ಮ ವೃತ್ತಿ ಜೀವನದಲ್ಲಿ ಎರಡನೇ ಸಲ ವಿಶ್ವದ ಅಗ್ರಮಾನ್ಯ ಬ್ಯಾಟರ್ ಎನಿಸಿದ್ದಾರೆ.ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ
ಕೆಲವೇ ಹೊತ್ತಿಗೂ ಮುನ್ನ ಈ ಬೆಳವಣಿಗೆ ಕಂಡುಬಂದಿದೆ.2023ರ ಏಕದಿನ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲೂ ಬಾಬರ್ ಅವರನ್ನೇ ಹಿಂದಿಕ್ಕಿದ ಗಿಲ್ ಅಗ್ರಪಟ್ಟ ಅಲಂಕರಿಸಿದ್ದರು.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಗಿಲ್ ಒಟ್ಟಾರೆ 796 ರೇಟಿಂಗ್ ಅಂಕಗಳನ್ನು ಕಲೆ ಹಾಕಿದ್ದಾರೆ. ಮತ್ತೊಂದೆಡೆ ಎರಡನೇ ಸ್ಥಾನದಲ್ಲಿರುವ ಬಾಬರ್ 773 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಅಗ್ರ 10ರ ಪಟ್ಟಿಯಲ್ಲಿ ಭಾರತದ ನಾಲ್ವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು (761), ವಿರಾಟ್ ಕೊಹ್ಲಿ ಆರು (727) ಮತ್ತು ಶ್ರೇಯಸ್ ಅಯ್ಯರ್ ಒಂಬತ್ತನೇ (679) ಸ್ಧಾನದಲ್ಲಿದ್ದಾರೆ. ಈ ಪೈಕಿ ಶ್ರೇಯಸ್ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಫ್ಗಾನಿಸ್ತಾನದ ರಶೀದ್ ಖಾನ್ ಅವರನ್ನು ಹಿಂದಿಕ್ಕಿರುವ ಶ್ರೀಲಂಕಾದ ಸ್ಪಿನ್ನರ್ ಮಹೀಶ ತೀಕ್ಷಣ ಅಗ್ರಸ್ಥಾನಕ್ಕೇರಿದ್ದಾರೆ. ತೀಕ್ಷಣ 680 ಹಾಗೂ ರಶೀದ್ 669 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಅಗ್ರ 10ರ ಪಟ್ಟಿಯಲ್ಲಿ ಭಾರತದ ಕುಲದೀಪ್ ಯಾದವ್ ಒಂದು ಸ್ಥಾನ ಬಡ್ತಿ ಪಡೆದು ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ. ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 10ನೇ ಸ್ಥಾನದಲ್ಲಿದ್ದಾರೆ.