ಸುಳ್ಯ:ಕಳೆದ ಕೆಲವು ದಿನಗಳಿಂದ ಬೆಳಗ್ಗೆ ಸ್ವಲ್ಪ ಬೇಗ ಎದ್ದು ಮನೆಯಿಂದ ಹೊರ ಬಂದವರನ್ನು ದಟ್ಟ ಮಂಜು ಕವಿದ ವಾತಾವರಣ ಸ್ವಾಗತಿಸುತ್ತದೆ. ಮಳೆ, ಮೋಡದ ವಾತಾವರಣ ದೂರವಾಗಿ ಚುಮು ಚುಮು ಚಳಿ ಹಾಗೂ ದಟ್ಟ ಮಂಜಿನ ವಾತಾವರಣ ಕಂಡು ಬರುತ್ತಿದ್ದು ಬೆಳಗ್ಗಿನ ಮಂಜು ಮತ್ತು ಚಳಿ ಮುದ ನೀಡುತಿದೆ.ಮನೆಯಿಂದ ಹೊರ ಬಂದರೆ
ಮುತ್ತಿಕೊಳ್ಳುವ ಮಂಜು, ಪರಸ್ಪರ ಕಾಣದಷ್ಟು ರಸ್ತೆಯನ್ನು ಮಬ್ಬಾಗಿಸಿತ್ತದೆ.ಈ ವಾತಾವರಣ ಸಾಕಷ್ಟು ಮಂದಿಯನ್ನು ಪುಳಕಿತಗೊಳಿಸಿತು. ಸಾಕಷ್ಟು ಮಂದಿ ಬೆಚ್ಚಗೆ ಮಲಗಿದ್ದರೆ, ಇನ್ನು ಬಹಳ ಮಂದಿಗೆ ವಾಯು ವಿಹಾರ, ವಾಕಿಂಗ್, ಜಾಗಿಂಗ್ ಕ್ರೇಜ್. ಇಂಥ ಹವ್ಯಾಸ ಇದ್ದವರಿಗೆ ಬೆಳಗಿನ ಮಂಜಿನ ಚೆಲ್ಲಾಟ ಮುದ ನೀಡುತ್ತದೆ.
ಬೆಳಗ್ಗೆ 6 ರಿಂದಲೇ ಮಂಜು ಇದ್ದು 7ರ ಸುಮಾರಿಗೆ ದಟ್ಟವಾಗಿ ಹರಡಿತ್ತು. ಸುತ್ತಲೂ ಬಿಳಿ ಮಂಜು ಆವರಿಸಿ ಪರಿಸರವಿಡೀ ಹಾಲ್ನೊರೆ ಸುರಿದಂತೆ

ಭಾಸವಾಗುತ್ತಿತ್ತು.ಬೆಳಗ್ಗೆ ವಾಕಿಂಗ್, ಜಾಗಿಂಗ್ ಹೋಗಿದ್ದ ಮಂದಿ ದಟ್ಟ ಮಂಜು ಕವಿದ ವಾತಾವರಣದ ಮಜಾ ಅನುಭವಿಸಿದರು. ವಾಯುಭಾರ ಕುಸಿತದ ಕಾರಣ ಮೊನ್ನೆ ತನಕ ಮೋಡ, ಮಳೆಯ ವಾತಾವರಣ ಇದ್ದು ಇದೀಗ ಮಂಜು ಆವರಿಸಿ ಪರಿಸರವಿಡೀ ಅಪರೂಪದ ದೃಶ್ಯ ಕಾವ್ಯ ಸೃಷ್ಠಿಸುತಿದೆ. ಹಲವರು ಇದನ್ನು ಕಣ್ತುಂಬಿಕೊಂಡು ಪುಳಕಿತರಾದರು. ಬದಲಾದ ವಾತಾವರಣದಿಂದ ಬೆಳಗ್ಗೆ ಸುಳ್ಯ ಸುಂದರವಾಗಿ ಕಾಣುತ್ತಿತ್ತು. ನಸುಕಿನ ವೇಳೆ ಇಡೀ ಸುಳ್ಯ ಮಂಜಿನ ನಗರಿಯಾಗಿ ಮಾರ್ಪಾಡಾಗಿತ್ತು. ಮುಂಜಾನೆಯ ಮಂಜು ವಿಶೇಷ ಮುದ ನೀಡುತ್ತದೆ ಎಂದು

ವಾಕಿಂಗ್ ಮಾಡುತ್ತಿದ್ದ ಮಂದಿ ಅನುಭವ ಹಂಚಿಕೊಂಡರು.ಸುಳ್ಯ ಹಾಗೂ ಪರಿಸರದಲ್ಲಿ ಎರಡು ದಿನಗಳಿಂದ ಒಣ ಹವೆ ಮತ್ತು ಬೆಳಗ್ಗಿನ ಜಾವ ಚಳಿಯ ವಾತಾವರಣ ಇದೆ.ಸುಳ್ಯ ತಾಲೂಕಿನ ವಿವಿಧ ಗ್ರಾಮಗಳು ಹಾಗು ಗಡಿ ಗ್ರಾಮಗಳಲ್ಲಿ ಚಳಿಯ ವಾತಾವರಣ ಕಂಡು ಬಂದಿದೆ. ಒಂದೆರಡು ದಿನಗಳಿಂದ ಗ್ರಾಮೀಣ ಭಾಗದಲ್ಲಿ ಚುಮು ಚುಮು ಚಳಿಯ ಅನುಭವ ಉಂಟಾಗುತ್ತಿದೆ.ನವೆಂಬರ್ ಕೊನೆ ಮತ್ತು ಡಿಸೆಂಬರ್ ತಿಂಗಳಿನಲ್ಲಿ ತಾಪಮಾನದಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದ್ದು ಚಳಿ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

















