ಲಖನೌ:ಗಾಯಮುಕ್ತಗೊಂಡಿರುವ ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪ್ಲೇ-ಆಫ್ಗೆ ಲಗ್ಗೆ ಇಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೆಚ್ಚು ಬಲ ಬಂದಂತಾಗಿದೆ.ಈ ಸಂಬಂಧ
ಆರ್ಸಿಬಿ ತನ್ನ ಅಧಿಕೃತ ಖಾತೆಯಲ್ಲಿ ಜೋಶ್ ಅವರಿಗೆ ಸ್ವಾಗತ ಕೋರಿದ್ದಾರೆ.ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಆರ್ಸಿಬಿ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ಹ್ಯಾಜಲ್ವುಡ್ ಪ್ರಮುಖ ಪಾತ್ರ ವಹಿಸಿದ್ದರು. ಈವರೆಗೆ 10 ಪಂದ್ಯಗಳಲ್ಲಿ 18 ವಿಕೆಟ್ಗಳನ್ನು ಗಳಿಸಿದ್ದಾರೆ.
ಅವರು ಭುಜ ನೋವಿನಿಂದಾಗಿ ವಿಶ್ರಾಂತಿಯಲ್ಲಿದ್ದರು. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದರು.
34 ವರ್ಷದ ಹ್ಯಾಜಲ್ವುಡ್ ಈಗ ಸಂಪೂರ್ಣ ದೈಹಿಕ ಸಾಮರ್ಥ್ಯ ಮರಳಿ ಪಡೆದಿದ್ದು, ಬ್ರಿಸ್ಬೇನ್ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾದ ತಂಡದೊಂದಿಗೆ ಅಭ್ಯಾಸವನ್ನು ಪುನರಾರಂಭಿಸಿದ್ದರು.ಹ್ಯಾಜಲ್ವುಡ್ ಚೇತರಿಕೆಯ ಕುರಿತು ಆರ್ಸಿಬಿ ಮ್ಯಾನೇಜ್ಮೆಂಟ್ ನಿಗಾ ವಹಿಸಿತ್ತಲ್ಲದೆ ನಿರಂತರ ಸಂಪರ್ಕದಲ್ಲಿತ್ತು.ಆರ್ಸಿಬಿಯ ಕೊನೆಯ ಲೀಗ್ ಪಂದ್ಯದಲ್ಲಿ ಹ್ಯಾಜಲ್ವುಡ್ ಆಡುವ ಸಾಧ್ಯತೆಯಿದೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆರ್ಸಿಬಿಗೆ ಹ್ಯಾಜಲ್ವುಡ್ ಆಗಮನದಿಂದ ಹೆಚ್ಚಿನ ಬಲ ಸಿಕ್ಕಂತಾಗಿದೆ.