ಕೋಲ್ಕತ್ತ: ಆಲ್ರೌಂಡ್ ಆಟ ಆಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾನುವಾರ 40 ರನ್ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತು.
ಗೆಲುವಿನೊಂದಿಗೆ ಡೆಲ್ಲಿ ತಂಡವು ಈ ಆವೃತ್ತಿಯಲ್ಲಿ ಅಭಿಯಾನ ಮುಗಿಸಿತು. ರಾಜಸ್ಥಾನ ರಾಯಲ್ಸ್ ಗೆದ್ದ ಕಾರಣ ಡೆಲ್ಲಿ ಮತ್ತು
ಕೋಲ್ಕತ್ತ ತಂಡಗಳ ಪ್ಲೇ ಆಫ್ ಅವಕಾಶ ಮುಗಿದಿದ್ದರಿಂದ, ಲೀಗ್ ಹಂತದ ಕೊನೆಯ ಪಂದ್ಯವು ಔಪಚಾರಿಕವಾಗಿತ್ತು.ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಮೋಘ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 203 ರನ್ ಗಳಿಸಿತು.ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್ ತಂಡವು ಕುಲದೀಪ್ ಯಾದವ್ (29ಕ್ಕೆ3), ಲುಂಗಿ ಎನ್ಗಿಡಿ (27ಕ್ಕೆ3) ಹಾಗೂ ಮಿಚೆಲ್ ಸ್ಟಾರ್ಕ್ (26ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಎದುರು 18.4 ಓವರ್ಗಳಲ್ಲಿ 163 ರನ್ಗಳಿಗೆ ಹೋರಾಟ ಮುಗಿಸಿತು.ಅಗ್ರಕ್ರಮಾಂಕದ
ಬ್ಯಾಟರ್ಗಳಾದ ನಾಯಕ ಅಜಿಂಕ್ಯ ರಹಾನೆ (63; 39ಎ, 4×4, 6×4), ಮನೀಷ್ ಪಾಂಡೆ (25; 16 ಎ) ಹಾಗೂ ರೋವ್ಮನ್ ಪಾವೆಲ್ (29; 21ಎ) ಹೋರಾಟ ತೋರಿದರಾದರೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವಿಫಲರಾದರು.ಡಿಸಿ ಪರ ರಾಹುಲ್ (60; 30ಎ
ಐದು ಬೌಂಡರಿ ಹಾಗೂ 4 ಸಿಕ್ಸರ್) ಅಮೋಘ ಅರ್ಧಶತಕ ಗಳಿಸಿದರೆ, ಅಭಿಷೇಕ್ ಪೊರೆಲ್ (33; 18ಎ) ಬಿರುಸಿನ ಆಟವಾಡಿದರು. ಇವರಿಬ್ಬರು ಮೊದಲ ವಿಕೆಟ್ ಜೊತೆಯಾಟದಲ್ಲಿ40 (27ಎ) ರನ್ ಸೇರಿಸಿ ಉತ್ತಮ ಆರಂಭ ಕೊಟ್ಟರು.ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಕ್ಷರ್ ಪಟೇಲ್ (39; 25ಎ) ಹಾಗೂ ಡೇವಿಡ್ ಮಿಲ್ಲರ್ (28; 19ಎ) ಅವರು ಅಮೂಲ್ಯ ಕಾಣಿಕೆ ನೀಡಿದರು. ಆಶುತೋಷ್ ಶರ್ಮಾ 11 ಎಸೆತಗಳಲ್ಲಿ ಅಜೇಯ 18 ರನ್ ಸೂರೆ ಮಾಡಿದರು.ಕೆ.ಎಲ್.ರಾಹುಲ್ ಈ ಆವೃತ್ತಿಯಲ್ಲಿ 14 ಇನಿಂಗ್ಸ್ ಗಳಲ್ಲಿ 593 ರನ್ ಕಲೆಹಾಕಿದರು. ಅದರಲ್ಲಿ ಒಂದು ಶತಕ ಹಾಗೂ ಐದು ಅರ್ಧಶತಕಗಳು ಸೇರಿವೆ.














