ಅಹಮದಾಬಾದ್:ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 83 ರನ್ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿತು. ಇದು ಉಭಯ ತಂಡಗಳಿಗೂ ಲೀಗ್ ಹಂತದ ಕೊನೆ ಪಂದ್ಯವಾಗಿತ್ತು. ಈ ಸೋಲು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡಕ್ಕೆ ಐಪಿಎಲ್ ಪಾಯಿಂಟ್ ಪಟ್ಟಿಯ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ
ಸಾಧ್ಯತೆ ಕ್ಷೀಣಗೊಳಿಸಿದೆ. ಟೈಟನ್ಸ್ ತಂಡವು ಒಟ್ಟು 14 ಪಂದ್ಯಗಳಿಂದ 18 ಅಂಕ ಗಳಿಸಿದೆ. ಸದ್ಯ ಅಗ್ರಸ್ಥಾನದಲ್ಲಿಯೂ ಇದೆ.
ಆದರೆ ತಲಾ 17 ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ 16 ಪಾಯಿಂಟ್ಸ್ ಗಳಿಸಿರುವ ಮುಂಬೈ ಇಂಡಿಯನ್ಸ್ ತಂಡಗಳಿಗೆ ತಲಾ ಒಂದು ಪಂದ್ಯ ಬಾಕಿ ಇದೆ. ಆರ್ಸಿಬಿಯು ಲಖನೌ ಸೂಪರ್ ಕಿಂಗ್ಸ್ ವಿರುದ್ಧ ಮತ್ತು ಪಂಜಾಬ್ ತಂಡವು ಮುಂಬೈ ವಿರುದ್ಧ ಆಡಲಿವೆ.
231 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಟೈಟನ್ಸ್ ಪವರ್ಪ್ಲೇನಲ್ಲಿಯೇ ಶುಭಮನ್ ಗಿಲ್, ಜೋಸ್ ಬಟ್ಲರ್ ಮತ್ತು ಶೆರ್ಫೆನ್ ರುದರ್ಫೋರ್ಡ್ ವಿಕೆಟ್ಗಳನ್ನು ಕಳೆದುಕೊಂಡಿತು. ಆಗ ಸ್ಕೋರ್ಬೋರ್ಡ್ನಲ್ಲಿ ಕೇವಲ 35 ರನ್ಗಳಿದ್ದವು. ಇದರಿಂದ ಚೇತರಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ. 18.3 ಓವರ್ಗಳಲ್ಲಿ 147 ರನ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು.
ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ (41, 28ಎ, 4X6) ಗರಿಷ್ಠ ಸ್ಕೋರ್ ದಾಖಲಿಸಿದರು. ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡವು ಕೊನೆ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸಿತು. ಆದರೂ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯಿತು. ತಂಡದ ಮಟ್ಟಿಗೆ ಇದು ಅತ್ಯಂತ ಕಳಪೆ ಸಾಧನೆಯಾಗಿದೆ.
ಟಾಸ್ ಗೆದ್ದ ಚೆನ್ನೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆಯುಷ್ ಮ್ಹಾತ್ರೆ (34; 17ಎ, 4X3, 6X3) ಮತ್ತು ಡೆವೊನ್ ಕಾನ್ವೆ ಉತ್ತಮ ಆರಂಭ ನೀಡಿದರು. ಕಾನ್ವೆ (52; 35ಎ, 4X6, 6X2) ಮತ್ತು ಡೆವಾಲ್ಡ್ ಬ್ರೆವಿಸ್ (57; 23ಎ, 4X4, 6X5)ಅವರ ಅಬ್ಬರದ ಅರ್ಧಶತಕಗಳಿಂದಾಗಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 230 ರನ್ ಗಳಿಸಿತು.
ಸಂಕ್ಷಿಪ್ತ ಸ್ಕೋರು: ಚೆನ್ನೈ ಸೂಪರ್ ಕಿಂಗ್ಸ್: 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 230 (ಆಯುಷ್ ಮ್ಹಾತ್ರೆ 34, ಡೆವೊನ್ ಕಾನ್ವೆ 52, ಊರ್ವಿಲ್ ಪಟೆಲ್ 37, ಡೆವಾಲ್ಡ್ ಬ್ರೆವಿಸ್ 57, ರವೀಂದ್ರ ಜಡೇಜ ಔಟಾಗದೇ 21, ಪ್ರಸಿದ್ಧಕೃಷ್ಣ 22ಕ್ಕೆ2)
ಗುಜರಾತ್ ಟೈಟನ್ಸ್: 18.3 ಓವರ್ಗಳಲ್ಲಿ 147 (ಸಾಯಿ ಸುದರ್ಶನ್ 41, ಶಾರೂಕ್ ಖಾನ್ 19, ಅರ್ಷದ್ ಖಾನ್ 20, ರಾಹುಲ್ ತೆವಾಟಿಯಾ 14, ರವೀಂದ್ರ ಜಡೇಜ 17ಕ್ಕೆ2, ಅನ್ಷುಲ್ ಕಾಂಭೋಜ್ 13ಕ್ಕೆ3, ನೂರ್ ಅಹಮದ್ 21ಕ್ಕೆ3)







