ಮುಂಬೈ:ಐಪಿಎಲ್ ತಲುಪಿದ್ದು, ಪ್ಲೇ-ಆಫ್ಗೆ ವೇದಿಕೆ ಸಿದ್ಧಗೊಂಡಿದೆ. 10 ತಂಡಗಳು ಭಾಗವಹಿಸಿದ ಟೂರ್ನಿಯಲ್ಲಿ ನಾಲ್ಕು ತಂಡಗಳು ಪ್ಲೇ-ಆಫ್ಗೆ ತೇರ್ಗಡೆ ಹೊಂದಿದ್ದು, ಉಳಿದ ಆರು ತಂಡಗಳು ನಿರ್ಗಮಿಸಿವೆ.ಲೀಗ್ ಹಂತದಲ್ಲಿ 14 ಪಂದ್ಯಗಳ ಬಳಿಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ
ಅಗ್ರಸ್ಥಾನ ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ಗೆ ಲಗ್ಗೆ ಇಟ್ಟಿದೆ. ಆರ್ಸಿಬಿ ಜೊತೆಗೆ ಗುಜರಾತ್ ಟೈಟನ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ-ಆಫ್ಗೆ ಲಗ್ಗೆ ಇಟ್ಟಿವೆ.ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ನಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್ಸಿಬಿ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದೆ. ಇಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ. ಸೋತ ತಂಡಕ್ಕೆ ಮಗದೊಂದು ಅವಕಾಶ ಸಿಗಲಿದ್ದು, ಮೇ 29ರಂದು ಎರಡನೇ ಕ್ವಾಲಿಫೈಯರ್ನಲ್ಲಿ ಆಡಬೇಕಿದೆ. ಮತ್ತೊಂದೆಡೆ ಮೇ 27ರಂದು ನಡೆಯಲಿರುವ ಎಲಿಮಿನೇಟರ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ಗೆ ಪ್ರವೇಶಿಸಲಿದೆ. ಸೋತ ತಂಡವು ನಿರ್ಗಮಿಸಲಿದೆ.ಮೇ 29ರಂದು
ನಡೆಯಲಿರುವ ಎರಡನೇ ಕ್ವಾಲಿಫೈಯರ್ನಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡವು ಎಲಿಮಿನೇಟರ್ನಲ್ಲಿ ಗೆದ್ದ ತಂಡದ ಸವಾಲನ್ನು ಎದುರಿಸಲಿದೆ. ಇಲ್ಲಿ ಗೆದ್ದ ತಂಡವು ಫೈನಲ್ಗೆ ಲಗ್ಗೆ ಇಡಲಿದೆ. ಮೊದಲ ಕ್ವಾಲಿಫೈಯರ್ ಧರ್ಮಶಾಲಾದಲ್ಲಿ ನಡೆಯಲಿದ್ದು, ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ಪಂದ್ಯಗಳು ಮುಲ್ಲನಪುರದಲ್ಲಿ ನಿಗದಿಯಾಗಿವೆ. ಫೈನಲ್ ಪಂದ್ಯವು ಮೇ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ.
ಅಗ್ರಸ್ಥಾನದಲ್ಲಿರುವ ಮೊದಲ ಮೂರು ತಂಡಗಳು ಸಮಾನ 18 ಅಂಕಗಳನ್ನು ಪಡೆದರೂ ರನ್ರೇಟ್ ಆಧಾರದಲ್ಲಿ ಆರ್ಸಿಬಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆರ್ಸಿಬಿ, ಗುಜರಾತ್ ಎರಡು ಹಾಗೂ ಸನ್ರೈಸರ್ಸ್ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ 16 ಅಂಕಗಳೊಂದಿಗೆ ಪ್ಲೇ-ಆಫ್ಗೆ ಪ್ರವೇಶಿಸಿದೆ.














