ಸುಳ್ಯ:ಭಾರತದಲ್ಲಿ ನಮ್ಮ ಜೀವನ ಕಲೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ.ಭಾರತೀಯ ಕಲೆಗಳು ನಮ್ಮ ಮನಸ್ಸನ್ನು, ಬದುಕನ್ನು ಅರಳಿಸುತ್ತದೆ.ಈ ಕಲೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕಾದ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಸಾಮಾಜಿಕ ಕಾರ್ಯಕರ್ತ, ಹಿರಿಯರಾದ ನ.ಸೀತಾರಾಮ ಹೇಳಿದ್ದಾರೆ. ಕನಕಮಜಲು ಕನಕಕಲಾ ಗ್ರಾಮದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ
ಆ.11ರಂದು ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕನಕ ಸೌಧ ಸಭಾಂಗಣದಲ್ಲಿ ನಡೆದ ಗುರು ಪೂರ್ಣಮಾ ಆಚರಣೆ, ಗುರು ಡಾ.ಚೇತನ ರಾಧಾಕೃಷ್ಣ ಅವರ ಶಿಷ್ಯರಿಂದ ನೃತ್ಯ ನಮನ ಹಾಗು ಅಗಲಿದ ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ತವ್ಯ ಪ್ರಜ್ಞೆ ಮೂಡಿಸುವ ಕಾರ್ಯಕ್ರಮ ಎಂದು ಬಣ್ಣಿಸಿದ ಅವರು ಕಲೆಯ ಸತ್ವ ಮತ್ತು ಶಕ್ತಿ ಬಹಳ ದೊಡ್ಡದು.ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮನಸ್ಸು ಇದ್ದರೆ ಕಲೆಗಳು ಬೆಳಗಲು ಸಾಧ್ಯ. ಕಲೆ, ಸಂಗೀತವನ್ನು

ಅನುಭವಿಸುತ್ತಾ ಆಸ್ವಾದಿಸಬೇಕು. ಗುರುದೇವ ಅಕಾಡೆಮಿ ಭಾರತೀಯ ಕಲಾ ಪರಂಪರೆಗೆ ನೀಡುವ ಕೊಡುಗೆ ಸ್ತುತ್ಯರ್ಹ ಎಂದು ಅವರು ಅಭಿಪ್ರಾಯ ಪಟ್ಟರು.ಸಂಪತ್ ಕುಮಾರ್ ಮಡಿಕೇರಿ ಅಗಲಿದ ಡಾ.ಗಿರೀಶ್ ಭಾರದ್ವಾಜ್ ಅವರಿಗೆ ನುಡಿನಮನ ಸಲ್ಲಿಸಿದರು. ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಸೀತಾರಾಮ ಬುಡ್ಡೆಗುತ್ತು ಮುಖ್ಯ ಅತಿಥಿಗಳಾಗಿಯಾಗಿದ್ದರು.
ಗುರುದೇವ್ ಅಕಾಡೆಮಿಯ ಕಲಾ ನಿರ್ದೇಶಕರಾದ ಚೇತನ ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಗುರುದೇವ ಅಕಾಡೆಮಿಯು

ಕಳೆದ 32 ವರ್ಷಗಳಿಂದ ನೃತ್ಯ ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಬಂದಿದೆ. ಮಂಡ್ಯ, ಮೈಸೂರು, ಕುಶಾಲನಗರ ಶಾಖೆಯ ಜೊತೆಗೆ ಸ್ಥಳೀಯ ಭರತನಾಟ್ಯ ಕಲಾವಿದರ ತಂಡ ರೂಪಿಸಬೇಕು ಎಂಬ ನೆಲೆಯಲ್ಲಿ ಕನಕಮಜಲಿನಲ್ಲಿಯೂ ಭರತನಾಟ್ಯ, ನೃತ್ಯ ಕಲಾ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಗುರುದೇವ್ ಅಕಾಡೆಮಿಯ ವ್ಯವಸ್ಥಾಪಕರಾದ ರಾಧಾಕೃಷ್ಣ ಪಿ.ಎಂ. ವೇದಿಕೆಯಲ್ಲಿ ಉಪಸ್ತಿತರಿದ್ದರು.ಕನಕಮಜಲು ಯುವಕ ಮಂಡಲದ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯಪ್ರಸಾದ್ ಕಾರಿಂಜ ಸ್ವಾಗತಿಸಿ,ಉಪನ್ಯಾಸಕರಾದ ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.





























