ಸುಳ್ಯ:ಭಾರತೀಯ ಮಜ್ದೂರು ಸಂಘದ ವತಿಯಿಂದ ಕಾರ್ಮಿಕರ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ.ಈ ಹಿನ್ನಲೆಯಲ್ಲಿ ಆಗಸ್ಟ್ 18 ರಂದು ಮಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಎಂಎಸ್ ಸಂಯೋಜಿತ ಕಾರ್ಮಿಕ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ ಕಲ್ಮಂಜ ಇಎಸ್ಐಸಿ ವೇತನ ಮಿತಿಯ ಹೆಚ್ಚಳ, ಇಪಿಎಸ್ ಪಿಂಚಣಿ ಹೆಚ್ಚಳ,ಇಪಿಎಫ್ ವೇತನ ಮಿತಿ ,ಬೋನಸ್ ಹೆಚ್ಚಳ,ಆಶಾ,ಅಂಗನವಾಡಿ ಸೇರಿ ಯೋಜನಾ ನೌಕರರ ಗೌರವ ಧನ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಶ್ರಮ ಸಂಹಿತೆಗಳ ತಿದ್ದುಪಡಿ ಮತ್ತಿತರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ

ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪ್ರಮುಖರ ಬೇಡಿಕೆ,ಅಟೋ ಚಾಲಕ, ಮಾಲಕರ ವಿವಿಧ ಬೇಡಿಕೆಗಳು,ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸಿ, ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಬೇಕಾದ ನ್ಯಾಯಯುತ ವೇತನ, ಉದ್ಯೋಗ, ಭದ್ರತೆ ಮತ್ತು ಸಾಮಾಜಿಕ ಭದ್ರತೆ ಖಚಿತಪಡಿಸುವ ಸಮಗ್ರ ನೀತಿಯನ್ನು ಕೇಂದ್ರ ಹಾಗು ರಾಜ್ಯ ಸರ್ಕಾರ ಜಾರಿಗೊಳಿಸಬೇಕು.ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರ ಸ್ಥಳೀಯ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮತ್ತು ಕೆಂಪು ಕಲ್ಲು ಅಭಾವ ಸೃಷ್ಠಿಯಾಗಿರುವುದರಿಂದ ಕಾರ್ಮಿಕರಿಗೆ ಭಾರೀ ಸಮಸ್ಯೆ ಉಂಟಾಗಿದೆ. ಆದುದರಿಂದ ಮರಳು ಮತ್ತು ಕೆಂಪು ಕಲ್ಲು ಲಭ್ಯತೆಗೆ ಸಮಗ್ರ ಕಾನೂನು ರೂಪಿಸಬೇಕು ಎಂದು ಕುಮಾರನಾಥ ಶೆಟ್ಟಿ ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಪ್ರಕಾಶ್, ವಕಾರ್ಯದರ್ಶಿ ನಾರಾಯಣ.ಎಸ್.ಎಂ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಮಜ್ದೂರ್ ಸಂಘದ ಅಧ್ಯಕ್ಷ
ಮಧುಸೂದನ್, ಕಾರ್ಯದರ್ಶಿ ಅನಿಲ್ ಮಂಡೆಕೋಲು,ಭಾರತೀಯ ಮಜ್ದೂರ್ ಸಂಘದ ಕಡಬ ತಾಲೂಕು ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಜಗನ್ನಾಥ, ಮನೋಹರ, ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.





























