ಜೈಪುರ: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.
ಗುಜರಾತ್ ತಂಡವು 77 ರನ್ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು. ಸತತ ಎರಡನೇ ಪಂದ್ಯ ಸೋತ ರಾಜಸ್ಥಾನ ತಂಡದ
ಪ್ಲೇ ಆಫ್ ಹಾದಿ ಕಠಿಣವಾಗಿದೆ. ಗಿಲ್ (84;44ಎ) ಮತ್ತು ಸುದರ್ಶನ್ (55;36ಎ) ಅವರ ಅರ್ಧಶತಕಗಳ ನೆರವಿನಿಂದ ಗುಜರಾತ್ ತಂಡವು 4 ವಿಕೆಟ್ಗೆ 229 ರನ್ಗಳ ಭಾರಿ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು ರಶೀದ್ (33ಕ್ಕೆ 4), ಜೇಸನ್ ಹೋಲ್ಡರ್ (13ಕ್ಕೆ 3) ಮತ್ತು ಕಗಿಸೊ ರಬಾಡ (33ಕ್ಕೆ 2) ದಾಳಿಗೆ ತತ್ತರಿಸಿತು. ಹೀಗಾಗಿ, 16.3 ಓವರ್ಗಳಲ್ಲಿ 152 ರನ್ ಗಳಿಸಿ ಹೋರಾಟ ಮುಗಿಸಿತು.
ವೈಭವ್ ಸೂರ್ಯವಂಶಿ (36;16ಎ)ಉತ್ತಮ ಆರಂಭ ನೀಡಿದರು. ಕೀಪರ್ ಧ್ರುವ ಜುರೇಲ್ (24) ಮತ್ತು ರವೀಂದ್ರ ಜಡೇಜ (38;25ಎ) ಕೊಂಚ ಹೋರಾಟ ತೋರಿದರು. ಗಿಲ್ ಅವರು ಸುದರ್ಶನ್ ಅವರೊಂದಿಗೆ ಮೊದಲ ವಿಕೆಟ್ಗೆ 65 ಎಸೆತಗಳಲ್ಲಿ 118 ರನ್ ಸೇರಿಸಿದರು. ಗಿಲ್ ಒಂಬತ್ತು ಬೌಂಡರಿಗಳ ಜೊತೆ ಮೂರು ಸಿಕ್ಸರ್ಗಳನ್ನು ಸಿಡಿಸಿದರು. ಅವರಿಗೆ ಇದು ಹಾಲಿ ಆವೃತ್ತಿಯಲ್ಲಿ ನಾಲ್ಕನೇ ಅರ್ಧ ಶತಕ. ವಾಷಿಂಗ್ಟನ್ ಸುಂದರ್ (ಔಟಾಗದೇ 37; 20 ಎ) ಮತ್ತು ರಾಹುಲ್ ತೆವಾಟಿಯಾ (ಔಟಾಗದೇ 14; 4ಎ) ಅವರು ಮೊತ್ತವನ್ನು 225 ದಾಟಿಸಿದರು. ಇದು ಈ ಋತುವಿನಲ್ಲಿ ಟೈಟನ್ಸ್ ದಾಖಲಿಸಿದ ಅತ್ಯಧಿಕ ಮೊತ್ತ.














