ಕೋಲ್ಕತ್ತ:ಗುಜರಾತ್ ಟೈಟನ್ಸ್ ತಂಡವು ಸೋಮವಾರ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 39 ರನ್ಗಳಿಂದ ಜಯ ಗಳಿಸಿತು. ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.ನಾಯಕ ಶುಭಮನ್ ಗಿಲ್ (90;55ಎ) ಮತ್ತು ಸಾಯಿ ಸುದರ್ಶನ್ (52;36ಎ) ಅವರ ಅರ್ಧಶತಕಗಳ ಬಳಿಕ ಬೌಲರ್ಗಳ ಸಾಂಘಿಕ ದಾಳಿಯ ನೆರವಿನಿಂದ
ಜಿಟಿ ಸುಲಭ ಜಯ ದಾಖಲಿಸಿತು. ಗೆಲುವಿಗೆ 199 ರನ್ ಬೆನ್ನಟ್ಟಿದ ಹಾಲಿ ಚಾಂಪಿಯನ್ ಕೋಲ್ಕತ್ತ ತಂಡವು ಯಾವುದೇ ಹಂತದಲ್ಲೂ ಪ್ರತಿರೋಧ ತೋರದೆ 8ಕ್ಕೆ 159 ರನ್ ಗಳಿಸಿ ಸವಾಲನ್ನು ಮುಗಿಸಿತು. ನಾಯಕ ಅಜಿಂಕ್ಯ ರಹಾನೆ (50;36ಎ, 4×5, 6×1) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಕ್ವಿಂಟನ್ ಡಿ ಕಾಕ್ ಬದಲು ಆರಂಭಿಕ ಆಟಗಾರನಾಗಿ ಅವಕಾಶ ಪಡೆದ ರೆಹಮಾನುಲ್ಲಾ ಗುರ್ಬಾಜ್ (1) ನಿರಾಸೆ ಮೂಡಿಸಿದರು. ಸುನೀಲ್ ನಾರಾಯಣ್ (17), ವೆಂಕಟೇಶ್ ಅಯ್ಯರ್ (14), ರಿಂಕು ಸಿಂಗ್ (17) ಮತ್ತೆ ವಿಫಲರಾದರು. ತವರಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಕೋಲ್ಕತ್ತ ತಂಡಕ್ಕೆ ಇದು ಮೂರನೇ ಸೋಲು.ವೇಗಿ ಪ್ರಸಿದ್ಧ ಕೃಷ್ಣ, ಸ್ಪಿನ್ನರ್ ರಶೀದ್ ಖಾನ್ ಎರಡು ವಿಕೆಟ್ ಗಳಿಸಿ ಮಿಂಚಿದರು.ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಗುಜರಾತ್ ತಂಡವು ಗಿಲ್, ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರ ಬಿರುಸಿನ ಆಟದಿಂದ 3 ವಿಕೆಟ್ಗೆ 198 ರನ್ಗಳ ಉತ್ತಮ ಮೊತ್ತ ಕಲೆಹಾಕಿತು.
ಗಿಲ್ ಈ ಋತುವಿನ ಮೊದಲ ಶತಕದತ್ತ ಕಾಲಿಡುವಂತೆ ಕಂಡರು. ಆದರೆ ವೈಭವ್ ಆರೋರಾ ಫುಲ್ಟಾಸ್ ಎಸೆತವನ್ನು ಫ್ಲಿಕ್ ಮಾಡುವ ಯತ್ನದಲ್ಲಿ ಡೀಪ್ ಸ್ಕ್ವೇರ್ ಲೆಗ್ನಲ್ಲಿದ್ದ ರಿಂಕು ಸಿಂಗ್ ಅವರಿಗೆ ಕ್ಯಾಚಿತ್ತರು. ಗಿಲ್ ಆಟದಲ್ಲಿ 10 ಬೌಂಡರಿ, ಮೂರು ಸಿಕ್ಸರ್ಗಳಿದ್ದವು. ಸುದರ್ಶನ್ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅವರು ಈ ಆವೃತ್ತಿಯಲ್ಲಿ ಐದನೇ ಅರ್ಧಶತಕ ದಾಖಲಿಸಿದರು.
ಗಿಲ್ ಮತ್ತು ಸುದರ್ಶನ್ ಮೊದಲ ವಿಕೆಟ್ಗೆ 114 (75ಎ) ರನ್ಗಳ ಜೊತೆಯಾಟವಾಡಿದರು. ಬಟ್ಲರ್ ಬಿರುಸಿನ ಆಟವಾಡಿ 23 ಎಸೆತಗಳಲ್ಲಿ 8 ಬೌಂಡರಿಗಳಿದ್ದ 41 ರನ್ ಗಳಿಸಿ ಮತ್ತೆ ಅಜೇಯರಾಗುಳಿದರು.