ಸುಳ್ಯ:ವೇತನ ಬಿಡುಗಡೆ ಆಗದ ಕಾರಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಡಿಗ್ರೂಪ್ ನೌಕರರು ಮೂರು ದಿನಗಳಿಂದ ನಡೆಸಿದ್ದ ಮುಷ್ಕರ ವಾಪಾಸ್ ಪಡೆಯಲಾಗಿದೆ. ಜೂ.10ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ
ಸೂಚನೆಯಂತೆ ಮಾರ್ಚ್ ತಿಂಗಳ ವೇತನ
ಬಿಡುಗಡೆಯಾಗಿದ್ದು,ವೈದ್ಯಕೀಯ ಸಹ ನಿರ್ದೇಶಕರ ಸಹಿಯಾದಲ್ಲಿ ಮುಂದಿನ 5 -6 ದಿನಗಳಲ್ಲಿ ಮೇ ತಿಂಗಳವರೆಗಿನ ವೇತನ ಪಾವತಿಯಾಗಲಿದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ವಾಪಾಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ. 3 ತಿಂಗಳ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ಆಸ್ಪತ್ರೆಯ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಡಿಗ್ರೂಪ್ ನೌಕರರು ಜೂ.6ರಿಂದ ಕೆಲಸಕ್ಕೆ ಹಾಜರಾಗದೆ ಮುಷ್ಕರ ಹೂಡಿದ್ದರು.
ಆಂಬುಲೆನ್ಸ್ ಚಾಲಕರ ಸೇವೆಗೆ ಕೃತಜ್ಞತೆ:
ಡಿಗ್ರೂಪ್ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಆಸ್ಪತ್ರೆಯ ರೋಗಿಗಳಿಗೆ ಸಮಸ್ಯೆ ಆಗದಂತೆ ಉಚಿತ ಸೇವೆ ಸಲ್ಲಿಸಿದ ಸುಳ್ಯ ತಾಲೂಕು ಆಂಬುಲೆನ್ಸ್ ಮಾಲಕ, ಚಾಲಕರ ಸಂಘದ ಸದಸ್ಯರ ಸೇವೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ.ಕೃತಜ್ಞತೆ ಸಲ್ಲಿಸಿದ್ದಾರೆ.