ಸುಳ್ಯ: ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಗ್ಗಿನ ಉಪಹಾರವಾಗಿ ಬ್ರೆಡ್ ಬದಲಾಗಿ ಇಡ್ಲಿ, ಸಾಂಬಾರ್ ವಿತರಣೆಗೆ ಚಾಲನೆ ನೀಡಲಾಗಿದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಡಾ.ಕರುಣಾಕರ ಕೆ.ವಿ. ಯವರು ಇಡ್ಲಿ, ಸಾಂಬಾರ್ ವಿತರಣೆಗೆ ಚಾಲನೆ ನೀಡಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಹೀದ್ ಪಾರೆ, ಅಬ್ದುಲ್ ರಝಾಕ್, ಚಂದ್ರನ್ ಕೂಟೇಲ್ ಮೊದಲಾದವರು ಇದ್ದರು.
ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ
ದಾಖಲಾಗಿದ್ದವರಿಗೆ ಬೆಳಗ್ಗಿನ ಉಪಹಾರವಾಗಿ ಬ್ರೆಡ್ ನೀಡಲಾಗುತ್ತಿತ್ತು. ಇದು ಸಾಕಾಗುವುದಿಲ್ಲ ಎಂದು ರೋಗಿಗಳು ಮನವಿ ಮಾಡಿಕೊಂಡರು. ಈ ಹಿನ್ನಲೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಹೀದ್ ಪಾರೆ ಕೂಡಾ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಬೆಳಗ್ಗಿನ ಆಹಾರವಾಗಿ ಇಡ್ಲಿ, ಸಾಂಬಾರ್ ವಿತರಣೆಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದನೆ ನೀಡಿದ ಆರೋಗ್ಯ ಸಚಿವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಜು.11ರ ಬೆಳಗ್ಗಿನಿಂದ ಒಳ ರೋಗಿಗಳಿಗೆ ಇಡ್ಲಿ, ಸಾಂಬಾರ್ ವಿತರಣೆ ಆರಂಭಗೊಂಡಿದೆ.














