ಸುಳ್ಯ:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ (ಎಸ್ವೈಎಸ್) ನೇತೃತ್ವದಲ್ಲಿ ಸೌಹಾರ್ದ ಸಂಚಾರ ಸ್ವಾಗತ ಸಮಿತಿಯ ಸಹಯೋಗದಲ್ಲಿ
ಕುಂದಾಪುರದಿಂದ ಸುಳ್ಯದ ತನಕ ಸೌಹಾರ್ದ ಸಂಚಾರ ನಡೆಯಲಿದೆ. ಜು.16ರಂದು ಸಂಜೆ ಸುಳ್ಯ ನಗರದಲ್ಲಿ ಸೌಹಾರ್ದ ಸಂಚಾರ ಮತ್ತು ಸಮಾಪನ ಸಮ್ಮೇಳನ ನಡೆಯಲಿದೆ ಎಂದು ಸೌಹಾರ್ದ ಸಂಚಾರ ಸ್ವಾಗತ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಸ್ವಾಗತ ಸಮಿತಿಯ ಚೆಯರ್ಮೆನ್ ಮಹಮ್ಮದ್ ಕುಂಞಿ ಗೂನಡ್ಕ ಕರಾವಳಿ ಕರ್ನಾಟಕವನ್ನು ಒಂದು ಸೌಹಾರ್ದ ಬೀಡನ್ನಾಗಿ ರೂಪಿಸಲು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ‘ಹೃದಯ ಹೃದಯಗಳನ್ನು ಬೆಸೆಯೋಣ” ಎಂಬ ಸಂದೇಶವನ್ನು ಸಾರಲು ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯು ಜುಲೈ 14, 15, 16 ಈ ಮೂರು ದಿನಗಳ ಸೌಹಾರ್ದ ಸಂಚಾರವನ್ನು ಹಮ್ಮಿಕೊಂಡಿದ್ದು, ಕುಂದಾಪುರ ದಿಂದ ಸುಳ್ಯದವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 15ಕೇಂದ್ರಗಳಲ್ಲಿ ಎಲ್ಲಾ ಪಕ್ಷ, ಜಾತಿ, ಮತ, ಪಂಥ-ಪಂಗಡಗಳ ಜನರನ್ನು ಒಟ್ಟು ಸೇರಿಸಿಕೊಂಡು ಕೈಕೈಹಿಡಿದು ಕಾಲ್ನಡಿಗೆಯಲ್ಲಿ ಸಂಚರಿಸುವ ವಿಶೇಷವಾದ ಕಾರ್ಯಕ್ರಮವನ್ನು

ಹಮ್ಮಿಕೊಳ್ಳಲಾಗಿದೆ. ಈ ಸೌಹಾರ್ದ ಸಂಚಾರ ಎಂಬ ಜಾಥಾದಲ್ಲಿ ಎಲ್ಲಾ ಧರ್ಮೀಯರೂ ಒಟ್ಟಾಗಿ ಭಾಗವಹಿಸಲಿದ್ದು, ಆ ಮೂಲಕ ಸೌಹಾರ್ದ ಸಮಾಜ ಕಟ್ಟಲು ನಾವೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಜುಲೈ 16 ಸಂಜೆ 4:30 ಕ್ಕೆ ಸೌಹಾರ್ದ ಸಂಚಾರ ಜಾಥವು ಸುಳ್ಯಕ್ಕೆ ತಲುಪಲಿದೆ.
ಸುಳ್ಯ ಬಸ್ ನಿಲ್ದಾಣದ ಬಳಿಯಿಂದ ಗಾಂಧಿನಗರ ತನಕ ಸೌಹಾರ್ದ ಸಂಚಾರ ನಡೆಯಲಿದೆ. ಈ ಸಂಚಾರದಲ್ಲಿ ಮುಸ್ಲಿಂ, ಹಿಂದು, ಕ್ರೈಸ್ತ, ಜೈನ, ಭೌದ್ಧ ಧರ್ಮದವರು ಆಗುವುದರೊಂದಿಗೆ ಇವೆಲ್ಲಕ್ಕಿಂತ ಮೊದಲು ಮಾನವರಾಗಿ ಎಂಬ ಸಂದೇಶ ವನ್ನು ತಲುಪಿಸುವ ಪ್ರಯತ್ನ ಮಾಡಲಿದ್ದೇವೆ. ಬಳಿಕ ಗಾಂಧಿನಗರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸರ್ವ ಧರ್ಮಗಳ ಗುರುಗಳು, ಪ್ರಮುಖರು, ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಜ್ಲಿಸ್ ಎಜುಕೇಷನ್ ಇದರ ಚೆಯರ್ಮೆನ್ ಸಯ್ಯದ್ ಅಶ್ರಫ್ ತಂಙಳ್ ಆದೂರ್,ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ನಾಥ್ ಜಿ,ಗುತ್ತಿಗಾರು ಹಾಗೂ ನೆಟ್ಟಣ ಹಾಗೂ ಬೆಳ್ತಂಗಡಿ ಧರ್ಮ ಪ್ರಾಂತ್ಯ ಜನ ಸಾಮಾನ್ಯ ಆಯೋಗದ ನಿರ್ದೇಶಕರಾದ ಫಾದರ್ ಆದರ್ಶ್ ಜೋಸೆಫ್ ಹಾಗೂ ಎಲ್ಲಾ ಧಾರ್ಮಿಕ ಮುಖಂಡರುಗಳು, ಸಾಮಾಜಿಕ ರಾಜಕೀಯ ಮುಖಂಡರುಗಳು,ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೌಹಾರ್ದ ಸಂಚಾರ ಸ್ವಾಗತ ಸಮಿತಿಯ
ವೈಸ್ ಚೆಯರ್ಮೆನ್ ಕೆ.ಎಂ.ಮುಸ್ತಫ ಜನತಾ,
ಜನರಲ್ ಕನ್ವೀನರ್ ಅಬೂಬಕ್ಕರ್ ಅಡ್ಕಾರ್, ಫಿನಾನ್ಸ್ ಸೆಕ್ರೆಟರಿ ಮೂಸಾ ಕುಂಞಿ ಪೈಂಬೆಚ್ಚಾಲ್, ವೈಸ್ ಕನ್ವೀನರ್ ಅಬ್ದುಲ್ ಹಮೀದ್ ಸುಣ್ಣಮೂಲೆ,
ಕೋ-ಆರ್ಡಿನೆಟರ್ ಸಿದ್ದೀಕ್ ಗೂನಡ್ಕ, ಎಸ್ವೈಎಸ್ ವಲಯ ಅಧ್ಯಕ್ಷ ಅಬ್ದುಲ್ ಲತೀಫ್ ಝೌಹರಿ, ಎಸ್ವೈಎಸ್ ಜಿಲ್ಲಾ ಕ್ಯಾಬಿನೆಟ್ ಸದಸ್ಯ ಹಸೈನಾರ್ ವಳಲಂಬೆ ಉಪಸ್ಥಿತರಿದ್ದರು.















