ಸುಳ್ಯ:ಸುಳ್ಯ ನಗರ ಸಮೀಪದ ನಾಗಪಟ್ಟಣ ಸೇತುವೆ ದುರಸ್ತಿ ಹಿನ್ನಲೆಯಲ್ಲಿ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ ದ.ಕ.ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಕಾಮಗಾರಿ ನಿಮಿತ್ತ ಮೇ.1ರಿಂದ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳು ತಿಳಿಸಿದ್ದಾರೆ.ಸುಳ್ಯ ತಾಲೂಕಿನ
ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ ಜಿಲ್ಲಾ ಮುಖ್ಯ ರಸ್ತೆಯ ಕಿ.ಮೀ.0.80 ರಲ್ಲಿನ ಸೇತುವೆಯ ದುರಸ್ತಿ ಕೆಲಸದ ಪ್ರಯುಕ್ತ ಸೇತುವೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸೇತುವೆಯಲ್ಲಿನ ಬೇರಿಂಗ್, ಎಕ್ಸ್ಪಾನ್ಸನ್ ಜಾಯಿಂಟ್ಗಳನ್ನು ದುರಸ್ತಿಪಡಿಸಬೇಕಾಗಿರುತ್ತದೆ ಹಾಗೂ ದುರಸ್ತಿ ಸಮಯದಲ್ಲಿ ಸೇತುವೆ ಮೇಲೆ ವಾಹನ ಸಂಚಾರ ಅಸಾಧ್ಯವಾಗಿರುವುದಾಗಿ, ಈ ನಿಟ್ಟಿನಲ್ಲಿ ರಸ್ತೆಯಲ್ಲಿ ಏ.15ರಿಂದ ಮೇ.31ರ ತನಕ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಮಾಡಬೇಕು ಎಂದು ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಏ.15ರಿಂದ ಮೇ. 31ರ ತನಕ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಸೇತುವೆಯ ಬೇರಿಂಗ್ ಮತ್ತಿತರ ಉಪಕರಣಗಳಿಗೆ ಆರ್ಡರ್ ನೀಡಿದ್ದು ಅದು ಆಗಮಿಸಿ ಪೂರ್ಣ ಪ್ರಮಾಣದಲ್ಲಿ ದುರಸ್ತಿ ಕಾಮಗಾರಿ ಆರಂಭಿಸಲು ಇನ್ನೂ ಕೆಲವು ದಿನಗಳು ತೆಗೆದುಕೊಳ್ಳಬಹುದು. ಆದುದರಿಂದ ಮೇ.1ರಿಂದ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆಯ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಗೋಪಾಲ್ ಅವರು ‘ಸುಳ್ಯ ಮಿರರ್’ ಗೆ ಮಾಹಿತಿ ನೀಡಿದ್ದಾರೆ.
ಬದಲಿ ಮಾರ್ಗ ಸೂಚನೆ:
ಸೇತುವೆಯ ದುರಸ್ಥಿ ಸಮಯದಲ್ಲಿ ಸುಳ್ಯದಿಂದ ಆಲೆಟ್ಟಿ-ಬಡ್ಡಡ್ಕ-ಕೂರ್ನಡ್ಕ, ಬಡ್ಡಡ್ಕ,ಕಲ್ಲಪಳ್ಳಿ- ಪಾಣತ್ತೂರು ಮತ್ತು ಸುಳ್ಯದಿಂದ ನಾರ್ಕೋಡು-ಕೋಲ್ಟಾರು- ಕಣಕ್ಕೂರು-ಬಂದಡ್ಕ ಹಾಗೂ ಕೇರಳ ಭಾಗಕ್ಕೆ ಸಂಚರಿಸುವ ವಾಹನಗಳು ಜಿಲ್ಲಾ ಮುಖ್ಯ ರಸ್ತೆಯಾದ ಸುಳ್ಯ- ಕಾಂತಮಂಗಲ-ಅಜ್ಜಾವರ-ಮೇದಿನಡ್ಕ- ನಾರ್ಕೋಡು ಮತ್ತು ಸುಳ್ಯ-ಕಾಂತಮಂಗಲ- ಅಜ್ಜಾವರ-ಮಂಡೆಕೋಲು- ಕನ್ಯಾನ ಮಾರ್ಗವಾಗಿ ಕೇರಳ ಗ್ರಾಮೀಣ ರಸ್ತೆ ಮೂಲಕ ಸಂಚರಿಸಲು ಆದೇಶ ಹೊರಡಿಸಲಾಗಿದೆ.
ಈ ಆದೇಶದನ್ವಯ ರಸ್ತೆಯಲ್ಲಿ ಅವಶ್ಯವಿರುವ ಸೂಚನಾ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸೂಚಿಸಲಾಗಿದೆ.
















