ನವದೆಹಲಿ: ಜಿ20 ಶೃಂಗಸಭೆಯಲ್ಲಿ ಅಂಗೀಕರಿಸಲಿರುವ ಉದ್ದೇಶಿತ ‘ನವದೆಹಲಿ ಘೋಷಣೆ’ ಕುರಿತು ವಿಶ್ವ ನಾಯಕರಲ್ಲಿ ಒಮ್ಮತ ಮೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.ಎಲ್ಲರ ಸಹಕಾರದೊಂದಿಗೆ ‘ನವದೆಹಲಿ ಘೋಷಣೆ’ಯಲ್ಲಿ ಒಮ್ಮತ ಮೂಡಿದೆ’ ಎಂದು ಅವರು ಹೇಳಿದ್ದಾರೆ. ‘ಭವಿಷ್ಯದ ಪೀಳಿಗೆಗೆ ಸುಂದರ ಜಗತ್ತನ್ನು ನೀಡುವ ಹೊಣೆಗಾರಿಕೆ ವರ್ತಮಾನದಲ್ಲಿರುವವರ ಮೇಲಿದ್ದು, ಅದನ್ನು
ಸಾಕಾರಗೊಳಿಸಲು ಎಲ್ಲರೊಂದಿಗೆ ಎಲ್ಲರ ಏಳಿಗೆ, ಎಲ್ಲರ ವಿಶ್ವಾಸ ಮತ್ತು ಪ್ರತಿಯೊಬ್ಬರ ಪ್ರಯತ್ನ ದಿಂದ ಸಾಧ್ಯವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಕಳೆದ ಹಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಹೊಸ ಆಯಾಮದ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ. ಮಾನವತೆಯನ್ನು ಕೇಂದ್ರೀಕರಿಸಿಕೊಂಡು ಹೊಸ ದಿಕ್ಕಿನೆಡೆಗೆ ಸಾಗಬೇಕಾಗಿದೆ’ ಎಂದು ಮೋದಿ ವಿಶ್ವ ನಾಯಕರಿಗೆ ಹೇಳಿದರು.
ನಾವು ಈಗ ಎದುರಿಸುತ್ತಿರುವ ಸಂಕಷ್ಟಗಳನ್ನೂ ನಿವಾರಿಸಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಹೊಂದಬೇಕಾಗಿದೆ. ಆದರೆ ನಡೆಯುತ್ತಿರುವ ಯುದ್ಧಗಳು ಜಗತ್ತಿನಲ್ಲಿ ವಿಶ್ವಾಸದ ಕೊರತೆಯನ್ನು ಸೂಚಿಸುತ್ತಿವೆ’ ಎಂದು ಹೇಳಿದರು.
‘ಜಗತ್ತಿನಲ್ಲಿ ದೇಶಗಳ ನಡುವೆ ಆರ್ಥಿಕ ಅಸಮಾನತೆ ಇದೆ. ಉತ್ತರ ಹಾಗೂ ದಕ್ಷಿಣ ಎಂಬ ವಿಭಜನೆ ಇದೆ. ಪೂರ್ವ ಹಾಗೂ ಪಶ್ಚಿಮಗಳೂ ದೂರ ಎಂಬ ಭಾವನೆ… ಇವೆಲ್ಲವನ್ನೂ ಉತ್ತಮ ಸಂಬಂಧಗಳ ಮೂಲಕ ಹತ್ತಿರವಾಗಿಸಲು ಸಾಧ್ಯವಿದೆ. ಆಹಾರ, ತೈಲದ ಅಭಾವ, ಭಯೋತ್ಪಾದನೆ ಮತ್ತು ಸೈಬರ್ ಸುರಕ್ಷತೆ, ಆರೋಗ್ಯ, ಇಂಧನ, ನೀರಿನ ಭದ್ರತೆ ಹೀಗೆ ಭವಿಷ್ಯದ ಪೀಳಿಗೆಗಳಿಗೆ ಇವೆಲ್ಲವೂ ಸಿಗಬೇಕಾದಲ್ಲಿ ನಾವೆಲ್ಲರೂ ಒಗ್ಗಟ್ಟಿನಲ್ಲಿ ಸಾಗಬೇಕಿದೆ’ ಎಂದರು.ಇದೇ ಸಂದರ್ಭದಲ್ಲಿ ಆಫ್ರಿಕಾದ ಒಕ್ಕೂಟಕ್ಕೆ ಜಿ20ರ ಸ್ಥಾಯಿ ಸದಸ್ಯತ್ವ ನೀಡಬೇಕು ಎಂಬ ಪ್ರಸ್ತಾಪವನ್ನು ಪ್ರಧಾನಿ ಮೋದಿ ಮುಂದಿಟ್ಟರು. ವಿಶ್ವ ನಾಯಕರ ಒಪ್ಪಿಗೆಯಂತೆ ಆಫ್ರಿಕಾದ ಒಕ್ಕೂಟದ ಪ್ರತಿನಿಧಿಯನ್ನು ಸಭೆಗೆ ಆಹ್ವಾನಿಸಿದರು. ಜಿ20 ರಾಷ್ಟ್ರಗಳ ಪರವಾಗಿ ಅಧ್ಯಕ್ಷತೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭೂಕಂಪ ಪೀಡಿತ ಮೊರಾಕೊ ಜನರ ನೆರವಿಗೆ ಎಲ್ಲಾ ರಾಷ್ಟ್ರಗಳು ಸದಾ ಸಿದ್ಧ. ಇಡೀ ವಿಶ್ವವೇ ಮೊರಾಕೊ ಜತೆಗಿದೆ ಎಂದರು.
ಜಿ20 ಶೃಂಗಕ್ಕೆ ಬಂದಿರುವ ಮುಖಂಡರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊನಾರ್ಕ್ನ ಕಲ್ಲಿನ ಚಕ್ರದ ಪ್ರತಿಕೃತಿ ಇರುವ ಗೋಡೆಯ ಬಳಿ ಸ್ವಾಗತಿಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಸೇರಿದಂತೆ ವಿಶ್ವದ ನಾಯಕರು ಭಾಗವಹಿಸಿದ್ದಾರೆ.