ನ್ಯೂಯಾರ್ಕ್:ಜೂನ್ 11ರಿಂದ ಫಿಫಾ ವಿಶ್ವಕಪ್ ಪುಟ್ಬಾಲ್ ಹಣಾಹಣಿ ಆರಂಭವಾಗಲಿದೆ. ಜುಲೈ 19ರ ತನಕ ನಡೆಯುವ ಜಾಗತಿಕ ಪುಟ್ಬಾಲ್ ಹಬ್ಬದಲ್ಲಿ 48 ತಂಡಗಳು ಭಾಗವಹಿಸಲಿದ್ದು 104 ಪಂದ್ಯಗಳು ನಡೆಯಲಿದ್ದು ವಿಶ್ವದ ಶ್ರೇಷ್ಠ ಆಟಗಾರರ ಕದನವು ಫುಟ್ಬಾಲ್ ಪ್ರಿಯರನ್ನು ಸೆಳೆಯಲಿದೆ. ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳು
ಜಂಟಿಯಾಗಿ ಈ ಪ್ರತಿಷ್ಠಿತ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ಈ ಬಾರಿಯ ಅತಿ ದೊಡ್ಡ ವಿಶೇಷವಾಗಿದೆ. ಈ ಹಿಂದೆ 32 ತಂಡಗಳು ಮಾತ್ರ ಭಾಗವಹಿಸುತ್ತಿದ್ದ ಈ ಜಾಗತಿಕ ಹಣಾಹಣಿಯಲ್ಲಿ, ಈ ಬಾರಿ ಒಟ್ಟು 48 ತಂಡಗಳು ಕಣಕ್ಕಿಳಿಯಲಿವೆ. ಒಟ್ಟು 104 ರೋಚಕ ಪಂದ್ಯಗಳು ನಡೆಯಲಿದ್ದು, ಇದು ಫುಟ್ಬಾಲ್ ಅಭಿಮಾನಿಗಳಿಗೆ ಅಕ್ಷರಶಃ ಒಂದು ತಿಂಗಳ ಕಾಲ ಕ್ರೀಡಾ ರಸದೌತಣವನ್ನು ನೀಡಲಿದೆ.
ಮೂರು ಆತಿಥೇಯ ದೇಶಗಳ 16 ಆಯ್ದ ನಗರಗಳಲ್ಲಿ ಈ ಪಂದ್ಯಗಳು ಜರುಗಲಿವೆ. ಮೆಕ್ಸಿಕೊದ ಐತಿಹಾಸಿಕ ‘ಎಸ್ಟಾಡಿಯೊ ಅಜ್ಟೆಕಾ’ ಬೃಹತ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಜುಲೈ 19ರಂದು ನ್ಯೂಯಾರ್ಕ್-ನ್ಯೂಜೆರ್ಸಿಯ ಮೆಟ್ಲೈಫ್ ಕ್ರೀಡಾಂಗಣದಲ್ಲಿ ಬಹುನಿರೀಕ್ಷಿತ ಫೈನಲ್ ಪಂದ್ಯ ನಡೆಯಲಿದೆ.
ಹಾಲಿ ಚಾಂಪಿಯನ್ ಬಲಿಷ್ಠ ಅರ್ಜೆಂಟೀನಾ ತಂಡವು ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಅವರ ನಾಯಕತ್ವದಲ್ಲಿ ತಂಡವು ಮತ್ತೊಮ್ಮೆ ಮ್ಯಾಜಿಕ್ ಮಾಡುವ ದಟ್ಟ ನಿರೀಕ್ಷೆಯಿದೆ. ಯುರೋಪಿಯನ್ ದೈತ್ಯ ತಂಡಗಳಾದ ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್ ಮತ್ತು ಜರ್ಮನಿ ತಂಡಗಳು ಪ್ರಶಸ್ತಿಗಾಗಿ ಕಠಿಣ ಪೈಪೋಟಿ ನೀಡಲು ಸಜ್ಜಾಗಿ ನಿಂತಿವೆ. ಯುವ ತಾರೆ ಕಿಲಿಯನ್ ಎಂಬಾಪೆ ಅವರ ಅದ್ಭುತ ವೇಗ ಮತ್ತು ಕೌಶಲ್ಯದ ಬಲದೊಂದಿಗೆ ಫ್ರಾನ್ಸ್ ಮತ್ತೊಮ್ಮೆ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಇತ್ತ ಜ್ಯೂಡ್ ಬೆಲ್ಲಿಂಗ್ಹ್ಯಾಮ್ ಮತ್ತು ಹ್ಯಾರಿ ಕೇನ್ ಅವರಂತಹ ಶ್ರೇಷ್ಠ ಹಾಗೂ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಇಂಗ್ಲೆಂಡ್ ತಂಡವು ತನ್ನ ದಶಕಗಳ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳುವ ದೃಢ ವಿಶ್ವಾಸದಲ್ಲಿದೆ.
ದಕ್ಷಿಣ ಅಮೆರಿಕದ ಮತ್ತೊಂದು ಪ್ರಬಲ ಹಾಗೂ ಜನಪ್ರಿಯ ತಂಡವಾದ ಬ್ರೆಜಿಲ್, ತನ್ನ ಆರನೇ ವಿಶ್ವಕಪ್ ಕಿರೀಟಕ್ಕಾಗಿ ತೀವ್ರವಾಗಿ ಹಂಬಲಿಸುತ್ತಿದೆ. ವಿನಿಶಿಯಸ್ ಜೂನಿಯರ್, ರೋಡ್ರಿಗೋ ಅವರಂತಹ ಚುರುಕಾದ ಯುವ ತಾರೆಯರೊಂದಿಗೆ ಬ್ರೆಜಿಲ್ ತಂಡವು ಎದುರಾಳಿಗಳಿಗೆ ಅತ್ಯಂತ ಅಪಾಯಕಾರಿಯಾಗಿ ಹೊರಹೊಮ್ಮಲಿದೆ. ನೇಮರ್ ಅವರ ಫಿಟ್ನೆಸ್ ಸಮಸ್ಯೆಗಳ ನಡುವೆಯೂ, ತಂಡದ ಸಾಂಪ್ರದಾಯಿಕ ಆಕ್ರಮಣಕಾರಿ ಆಟವು ಅಭಿಮಾನಿಗಳಲ್ಲಿ ದೊಡ್ಡ ಭರವಸೆ ಮೂಡಿಸಿದೆ. ಡಾರ್ಕ್ ಹಾರ್ಸ್ ಎನಿಸಿಕೊಂಡಿರುವ ಉರುಗ್ವೆ ತಂಡವೂ ಕೂಡ ತನ್ನ ಬಲಿಷ್ಠ ಪಡೆಯೊಂದಿಗೆ ಅಚ್ಚರಿಯ ಫಲಿತಾಂಶ ನೀಡುವ ಸಂಪೂರ್ಣ ಸಾಮರ್ಥ್ಯ ಹೊಂದಿದೆ.
ಈ ಬಾರಿಯ ವಿಶ್ವಕಪ್ ಕೇವಲ ಹಿರಿಯ ಫುಟ್ಬಾಲ್ ದಿಗ್ಗಜರ ಆಟಕ್ಕೆ ಸೀಮಿತವಾಗಿರದೆ, ಹೊಸ ಪೀಳಿಗೆಯ ಯುವ ತಾರೆಯರ ಉದಯಕ್ಕೂ ಸಾಕ್ಷಿಯಾಗಲಿದೆ. ಸ್ಪೇನ್ನ ಲ್ಯಾಮಿನೆ ಯಮಾಲ್, ಬ್ರೆಜಿಲ್ನ ಎಂಡ್ರಿಕ್ ಮತ್ತು ಜರ್ಮನಿಯ ಜಮಾಲ್ ಮುಸಿಯಾಲಾ ಅವರಂತಹ ಪ್ರತಿಭಾವಂತ ಯುವ ಆಟಗಾರರು ಜಾಗತಿಕ ಮಟ್ಟದಲ್ಲಿ ತಮ್ಮದೇ ಛಾಪು ಮೂಡಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿ ಏಷ್ಯಾ ಮತ್ತು ಆಫ್ರಿಕಾ ಖಂಡಗಳ ತಂಡಗಳಿಗೂ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ. ಜಪಾನ್, ದಕ್ಷಿಣ ಕೊರಿಯಾ, ಮೊರೊಕ್ಕೊ ಮತ್ತು ಸೆನೆಗಲ್ ತಂಡಗಳು ಪ್ರಬಲ ತಂಡಗಳಿಗೆ ಆಘಾತ ನೀಡುವ ಕೌಶಲ್ಯವನ್ನು ಹೊಂದಿವೆ.
ಕಳೆದ ಬಾರಿ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಮೊರೊಕ್ಕೊ ತಂಡ, ಈ ಬಾರಿಯೂ ಅದೇ ಅಸಾಧಾರಣ ಉತ್ಸಾಹ ಮತ್ತು ಛಲದೊಂದಿಗೆ ಕಣಕ್ಕಿಳಿಯಲಿದೆ.
2026ರ ಫಿಫಾ ವಿಶ್ವಕಪ್ನಲ್ಲಿ ಭಾರತೀಯ ಫುಟ್ಬಾಲ್ ತಂಡವು ಆಡದಿದ್ದರೂ, ಭಾರತೀಯ ಮೂಲದ ನಾಲ್ವರು ಪ್ರತಿಭಾವಂತ ಆಟಗಾರರು ವಿಭಿನ್ನ ದೇಶಗಳನ್ನು ಪ್ರತಿನಿಧಿಸುವ ಮೂಲಕ ನಮ್ಮ ಅಭಿಮಾನಿಗಳ ಗಮನ ಸೆಳೆಯಲಿದ್ದಾರೆ. ಕೇರಳದ ಕಣ್ಣೂರು ಮೂಲದ 19 ವರ್ಷದ ತಹಸೀನ್ ಮೊಹಮ್ಮದ್ ಜಮ್ಶೀದ್ ಕತಾರ್ ತಂಡವನ್ನು ಪ್ರತಿನಿಧಿಸಿದರೆ, ತಮಿಳು ಮೂಲದ ನಿಶಾನ್ ವೇಲುಪಿಳ್ಳೈ ಆಸ್ಟ್ರೇಲಿಯಾ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅದೇ ರೀತಿ, ತಮಿಳು ಹಿನ್ನೆಲೆಯುಳ್ಳ ಸ್ಯಾಮ್ಯುಯೆಲ್ ಮೌಟೌಸ್ಸಾಮಿ ಕಾಂಗೊ ತಂಡಕ್ಕಾಗಿ ಹಾಗೂ ಪಂಜಾಬಿ ಮೂಲದ ಸರ್ಪ್ರೀತ್ ಸಿಂಗ್ ನ್ಯೂಜಿಲೆಂಡ್ ತಂಡಕ್ಕಾಗಿ ಆಡಲಿದ್ದಾರೆ.













