ಸುಳ್ಯ:ಪರಿಸರ ನಾಶ, ಅರಣ್ಯ ನಾಶದಿಂದ ಪ್ರತಿ ವರ್ಷವೂ ಭೂಮಿ ಬತ್ತಿ ಬರಡಾಗುತ್ತಿದೆ. ಹವಾಮಾನ ವೈಪರೀತ್ಯ, ನೀರಿನ ಬವಣೆ, ಉಷ್ಣತೆ ವರ್ಷದಿಂದ ವರ್ಷಕ್ಕೆ ಏರುತಿದೆ. ಅರಣ್ಯ ಕಡಿಮೆಯಾಗುತ್ತಿದ್ದಂತೆ ಪರಿಸರದ ಅಸಮತೋಲನ ಸೃಷ್ಟಿಯಾಗುತ್ತಿದೆ.ಅದಕ್ಕೆ ಪರಿಸರ, ಮರ ಬೆಳೆಸುವುದೊಂದೇ ಪರಿಹಾರ ಎಂಬುದನ್ನು ಮನಗಂಡಿರುವ ಅರಣ್ಯ ಇಲಾಖೆ ಭೂಮಿಯನ್ನು ಹಸಿರಾಗಿಸಲು ಪಣತೊಟ್ಟಿದೆ. ಭೂಮಿಗೆ
ಹಸಿರು ಹೊದಿಕೆ ಹೊದಿಸಲು ಈ ಬಾರಿ ಸುಬ್ರಹ್ಮಣ್ಯ ಉಪವಿಭಾಗದ ಮೂರು ವಲಯಗಳಲ್ಲಿ ಒಟ್ಟು 1.79 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಸುಳ್ಯ ವಲಯದ ಮೇದಿನಡ್ಕ ಕೇಂದ್ರೀಯ ಸಸ್ಯಕ್ಷೇತ್ರದಲ್ಲಿ ಒಟ್ಟು 51 ಸಾವಿರ ಗಿಡಗಳನ್ನು ಬೆಳೆಯಲಾಗಿದೆ.ಇದರಲ್ಲಿ ಅರಣ್ಯ ಇಲಾಖೆಯ ನೆಡು ತೋಪುಗಳಲ್ಲಿ 48 ಸಾವಿರ ಗಿಡಗಳನ್ನು ನೆಡಲಾಗುತ್ತದೆ. ಸಾರ್ವಜನಿಕರ ವಿತರಣೆಗೆ 3 ಸಾವಿರ ಗಿಡಗಳನ್ನು ಮೀಸಲಿರಿಸಲಾಗಿದೆ. ಸುಳ್ಯ ವಲಯದಲ್ಲಿ

ಈ ವರ್ಷ 80 ಹೆಕ್ಟೇರ್ ಪ್ರದೇಶದಲ್ಲಿ ಹೊಸತಾಗಿ ಅರಣ್ಯ ಬೆಳೆಸಲು ಯೋಜನೆ ರೂಪಿಸಲಾಗಿದೆ. ಅರಂತೋಡಿನ ದೇರಾಜೆ, ಗುಂಡ್ಲ, ಚೋಡಿಪಣೆ, ಮರ್ಕಂಜದ ಕಟ್ಟಕೋಡಿ ಅಜ್ಜಾವರದ ಬೇಲ್ಯ, ಮಂಡೆಕೋಲು ಗ್ರಾಮದ ಮಾರ್ಗ, ತೋಟಪಾಡಿ ಮತ್ತಿತರ ಕಡೆಗಳಲ್ಲಿ ಹೊಸತಾಗಿ ನೆಡುತೋಪು ರಚನೆ ಮಾಡಲಾಗುವುದು ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.
ಪಂಜ ವಲಯದಲ್ಲಿ ಒಟ್ಟು 82,000 ಗಿಡಗಳನ್ನು ಬೆಳೆಸಲಾಗಿದ್ದು, 3ಸಾವಿರ ಗಿಡ ಸಾರ್ವಜನಿಕರ ವಿತರಣೆಗೆ ಮತ್ತು 79,000 ಗಿಡ ನೆಡು ತೋಪುಗಳಲ್ಲಿ ನೆಡಲಾಗುವುದು. 148 ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಅರಣ್ಯ ಬೆಳೆಸಲಾಗುತ್ತದೆ.
ಸುಬ್ರಹ್ಮಣ್ಯ ವಲಯದಲ್ಲಿ 46 ಸಾವಿರ ಗಿಡಗಳನ್ನು ಬೆಳೆಸಲಾಗಿದ್ದು,3 ಸಾವಿರ ಗಿಡ ರೈತರಿಗೆ ವಿತರಿಸಲು ಯೋಜನೆ ರೂಪಿಸಿದೆ.43ಸಾವಿರ ಗಿಡಗಳನ್ನು ನೆಡು ತೋಪುಗಳಲ್ಲಿ ನೆಡಲಾಗುವುದು. ಸುಬ್ರಹ್ಮಣ್ಯ ವಲಯದಲ್ಲಿ 64 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಬೆಳೆಸುವ

ಮೇದಿನಡ್ಕ ಸಸ್ಯಕ್ಷೇತ್ರದಲ್ಲಿ ಅರಣ್ಯ ಇಲಾಖೆ ಬೆಳೆದ ಗಿಡಗಳು
ಯೋಜನೆ ರೂಪಿಸಲಾಗಿದೆ.
ವೈವಿಧ್ಯಮ ಗಿಡಗಳ ರಾಶಿ:
30ಕ್ಕೂ ಹೆಚ್ಚು ವೈವಿಧ್ಯ ಗಿಡಗಳನ್ನು ಈ ಬಾರಿ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರದಲ್ಲಿ ಬೆಳೆಸಲಾಗಿದೆ.ಸಾಗುವಾನಿ, ಮಹಾಗನಿ, ಪುನರ್ಪುಳಿ, ನೆಲ್ಲಿ, ಬಿಲ್ವಪತ್ರೆ, ರಂಬುಟಾನ್, ಹೊಂಗೆ, ರಾಂಪತ್ರೆ, ಹಬ್ಲಿಕೆ, ರೆಂಜ, ಬಾದಾಮಿ,ನೇರಳೆ, ಕಿರಾಲ್ಬೋಗಿ, ಹಲಸು, ಮಾವು,ಅಂಟುವಾಳ, ಸೀಬೆ,ಜಾರಿಗೆ ಹುಳಿ, ಹುಣಸೆ, ಹೆಬ್ಬಲಸು,ಸಂಪಿ್ಎ, ಚಾಕೊಟೆ, ಲಕ್ಷ್ಮಣ ಫಲ, ಕಾಯಿಧೂಪ,ಅಶೋಕ, ಶ್ರೀಗಂಧ,ರಕ್ತ ಚಂದನ, ಸಂಪಿಗೆ, ಹೊಂಗೆ, ಮೊದಲಾದ ಗಿಡಗಳನ್ನು ಕ್ಷೇತ್ರದಲ್ಲಿ ತಯಾರಿಸಲಾಗಿದೆ.

ಗಿಡ ಬೆಳೆಯಲು ಸಹಾಯಧನ:
ರೈತರಿಗೆ, ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ವಿತರಿಸಲಾಗುತ್ತದೆ. ಅಲ್ಲದೆ ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಡಿಯಲ್ಲಿ ಗಿಡಗಳನ್ನು ಬೆಳೆಯಲು ರೈತರಿಗೆ ಸಹಾಯಧನವನ್ನೂ ನೀಡಲಾಗುತ್ತದೆ. ಪ್ರತಿ ಗಿಡಕ್ಕೆ ಮೊದಲ ವರ್ಷ 35, ಎರಡನೇ ವರ್ಷ 40 ಹಾಗೂ 3 ನೇ ವರ್ಷ 50 ಹೀಗೆ 3 ವರ್ಷದಲ್ಲಿ 125 ರೂಗಳನ್ನು ನೀಡಲಾಗುತ್ತದೆ.














