ಸುಳ್ಯ:ಜ್ಞಾನವನ್ನು ವಿಕಾಸಗೊಳಿಸುವುದು ಶಿಕ್ಷಣದ ಮುಖ್ಯ ಗುರಿ.ಅದುವೇ ಭಾರತೀಯ ಶಿಕ್ಷಣ ಪದ್ಧತಿ. ಶ್ರೇಷ್ಠವಾದ ಭಾರತೀಯ ಶಿಕ್ಷಣ ಪದ್ಧತಿ ಮತ್ತು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಶಾಲೆಗಳು ನಮ್ಮ ಆತ್ಮಶಕ್ತಿಯನ್ನು ಜಾಗೃತಿಗೊಳಿಸುತ್ತದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಎರಡು ದಿನಗಳ ಕಾಲ ನಡೆದ ಸುಳ್ಯ ತಾಲೂಕಿನ ಎಲಿಮಲೆಯ ದೇವಚಳ್ಳ ದ.ಕ.ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಮೌಲ್ಯಾಧಾರಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಸಾಧಕರನ್ನು ಸೃಷ್ಠಿಸುತ್ತದೆ.ಇಲ್ಲಿ
ಶಾಲಾ ಶತಮಾನೋತ್ಸವ ಗ್ರಾಮದ ಉತ್ಸವ ಆಗಿದೆ. ಯಾವುದೇ ಸೌಲಭ್ಯ ಇಲ್ಲದ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಶಾಲೆಯನ್ನು ಸ್ಥಾಪಿಸಿದ್ದು ಹಿರಿಯರ ದೂರದೃಷ್ಠಿಯ ಯೋಚನೆ ಎಂದ ಅವರು ಹಿಂದೆಲ್ಲ ಶಾಲೆ ಸಮಾಜದ ಸ್ವತ್ತಾಗಿತ್ತು.ಊರಿನ ಜನರು ಒಟ್ಟಾಗಿ ಬೆರೆಯುವ ಸಂಬಂಧ, ಆತ್ಮೀಯತೆ ಶಾಲೆಯೊಂದಿಗೆ ಇತ್ತು. ಜನರ ಮತ್ತು

ಸರಕಾರಿ ಶಾಲೆಯ ಜೊತೆಗಿನ ಸಂಬಂಧ ಕ್ಷೀಣ ವಾಗುವ ಇಂದಿನ ಸಂದರ್ಭದಲ್ಲಿ ಎಲಿಮಲೆ ಶಾಲೆಯಲ್ಲಿ ಇಡೀ ಸಮಾಜವೇ ಒಂದಾಗುವ ಮೂಲಕ ಮಾದರಿಯಾಗಿದೆ ಎಂದರು. ಶಾಲೆಯನ್ನು ಉಳಿಸಬೇಕಾದವರು ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಊರಿನ ಜನರು ಎಂದು ಅವರು ಹೇಳಿದರು.
ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎ.ವಿ. ತೀರ್ಥರಾಮ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸುಳ್ಯ ಟಿಎಪಿಸಿಎಂಎಸ್ನ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ,ಜ್ಞಾನದೀಪ ವಿದ್ಯಾಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ತಳೂರು, ದೇವಚಳ್ಳ
ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯೆ ಪ್ರೇಮಲತಾ ಕೇರ,ಪಿಡಿಒ ಬಿ.ಗುರುಪ್ರಸಾದ್, ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕರನ್ನು, ಪ್ರಸ್ತುತ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಾನಂದ ಪಟ್ಟೆ, ಶಾಲಾ ಮುಖೋಪಾಧ್ಯಾಯ ಶ್ರೀಧರ್ ಗೌಡ ಕೆ, ಶತಮಾನೋತ್ಸವ ಸಮಿತಿಯ ಖಜಾಂಜಿ ಕೆ.ಆರ್.ರಾಧಾಕೃಷ್ಣ ಮಾವಿನಕಟ್ಟೆ, ಕಾರ್ಯದರ್ಶಿ ಜಯಂತ ತಳೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ.ವಿ, ದಯಾನಂದ ಡಿ.ಟಿ. ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್ಡಿಎಂಸಿ ಅಧ್ಯಕ್ಷ ಜಯಾನಂದ ಪಟ್ಟೆ ಸ್ವಾಗತಿಸಿದರು. ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಿನಾಥ ಮೆತ್ತಡ್ಕ ಹಾಗೂ ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜ.25ರಂದು ಬೆಳಿಗ್ಗೆ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾರದಾಂಬಾ ಯಕ್ಷಗಾನ ಅಧ್ಯಯನದಿಂದ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ‘ಶ್ರೀ ರಾಮಾಯಣ ದರ್ಶನಂ ಪ್ರದರ್ಶನಗೊಂಡಿತು. ವಿದ್ಯಾರ್ಥಿಗಳಿಂದ ಹಾಗೂ ಪೋಷಕರಿಂದ ಸಾಂಸ್ಕೃತಿಕ ವೈವಿಧ್ಯ, ಜ್ಞಾನ ದೀಪ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ. ರಾತ್ರಿ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ‘ಮುರಳಿ ಈ ಪಿರಾ ಬರೋಲಿ ನಾಟಕ ನಡೆಯಿತು.